ಮೂಡುಬಿದಿರೆಯ ಜನಪ್ರಿಯ ದಂತ ವೈದ್ಯ ಡಾ. ವಿನಯಕುಮಾರ್ ಹೆಗ್ಡೆ ಅವರ್ ಗೆ ಸಿರಿಪುರ ಪ್ರಶಸ್ತಿ-2025

0
102


ಮೂಡುಬಿದಿರೆಯ ಜನಪ್ರಿಯ ದಂತ ವೈದ್ಯ ಡಾ. ವಿನಯಕುಮಾರ್ ಹೆಗ್ಡೆ ಯವರು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬಂಟ ಸಮುದಾಯದ
ಜನಪ್ರಿಯ ವೈದ್ಯರಾದ ಡಾ. ಪದ್ಮನಾಭ ಶೆಟ್ಟಿ ಮತ್ತು ಲಲಿತಾ ಹೆಗ್ಡೆ ಅವರ ಸುಪುತ್ರರಾಗಿ ಜನಿಸಿದರು. ಸಂಸ್ಕಾರವಂತ ಮನೆತನದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೆರ್ಡೂರಿನಲ್ಲಿ ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಪೂರೈಸಿದ ಇವರು ಮುಂದೆ ಮಣಿಪಾಲದ ಕಸ್ತೂರ್ಬಾ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ bachelor of dental surgery(B.D.S.) ಪದವಿಯನ್ನು ಪಡೆದರು. ಕಾಲೇಜು ಜೀವನದಲ್ಲಿ best outgoing student ಪ್ರಶಸ್ತಿಗೆ ಪಾತ್ರರಾದ ಇವರು ತಮ್ಮ ವೃತ್ತಿ ಜೀವನದಲ್ಲೂ ಕ್ರಿಯಾಶೀಲ ನಡೆನುಡಿಯನ್ನು ಅಳವಡಿಸಿಕೊಂಡರು.

ಇವರು1974 ರಿಂದ 1978 ರ ವರೆಗೆ ಮೂಡುಬಿದಿರೆಯ ಜಿ.ವಿ. ಪೈ ಮೆಮೋರಿಯಲ್ ಆಸ್ಪತ್ರೆಯಲ್ಲಿ ದಂತ ವೈದ್ಯರಾಗಿ ಸೇವೆ ಸಲ್ಲಿಸಿದರು. ಮುಂದೆ 1978 ರಲ್ಲಿ ಮೂಡುಬಿದಿರೆಯಲ್ಲಿ ತನ್ನದೇ ಆದ ಸುಸಜ್ಜಿತ ದಂತ ಚಿಕಿತ್ಸಾಲಯವನ್ನು ಆರಂಭಿಸಿ ತನ್ನ ಕನಸಿನ ನನಸಿಗಾಗಿ ಹೊಸ ದಾರಿಯನ್ನು ಹುಡುಕಿಕೊಂಡರು. ಮೂಡುಬಿದಿರೆ ಮತ್ತು ಪರಿಸರದ ಹಳ್ಳಿಗಳಲ್ಲಿ ದಂತ ಚಿಕಿತ್ಸೆಯ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸಲು ಅನೇಕ ಉಚಿತ ದಂತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿದರು. ಅಂದಿನಿಂದ ಇಂದಿನವರೆಗೂ ಅತ್ಯಂತ ಸೇವಾ ಮನೋಭಾವದಿಂದ, ಶ್ರದ್ಧೆಯಿಂದ ಕರ್ತವ್ಯವನ್ನು ನಿರ್ವಹಿಸಿ ಜನರ ಪ್ರೀತಿಗೆ ಪತ್ರರಾಗಿದ್ದಾರೆ. ಪ್ರೀತಿಯ ಮಾತಿನ ಮೂಲಕ ಚಿಕಿತ್ಸೆ ನೀಡುತ್ತ ನೋವಿನ ಅರಿವಾಗದಂತೆ ನೋಡಿಕೊಳ್ಳುವ ಜಾಣ್ಮೆ ಇವರದು. ಡಾ. ವಿನಯಕುಮಾರ ಹೆಗ್ಡೆ ಅವರ ಜನ ಸೇವಾ ಕೈಂಕರ್ಯವನ್ನು ಗುರುತಿಸಿ Indian dental association ರಾಷ್ಟ್ರೀಯ ದಂತ ವೈದ್ಯರ ಸಂಘ2007 ರಲ್ಲಿ ರಾಷ್ಟ್ರೀಯ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

1974ರಲ್ಲಿ ಮೂಡುಬಿದರೆ ರೋಟರಿ ಕ್ಲಬ್ಬಿನ ಸದಸ್ಯರಾಗಿ ಸೇರ್ಪಡೆಗೊಂಡ ಇವರು ರೋಟರಿ ಸಂಸ್ಥೆಯ ವಿವಿಧ ಹುದ್ದೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ.1986-87ರಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅವರ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಅವರನ್ನು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಪರವಾಗಿ ಗೌರವಿಸಲಾಗಿತ್ತು. ಮೂಡುಬಿದಿರೆ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂಸ್ಥೆಯ
ಶ್ರೇಯೋಭಿವೃದ್ದಿಗಾಗಿ ದುಡಿದಿದ್ದಾರೆ. ಕಳೆದ 50 ವರ್ಷಗಳಿಂದ ಮೂಡುಬಿದಿರೆಯ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದಿರುವ ಇವರು ಈ ನಾಡಿನ ಸದ್ಗುಣಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಸರಳ ಸಜ್ಜನಿಕೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಇವರು ತಮ್ಮ ಧರ್ಮಪತ್ನಿ ಶ್ರೀಮತಿ ಪ್ರಕಾಶಿನಿ ಹೆಗ್ಡೆ ಅವರೊಂದಿಗೆ ಸುಖೀ ದಾಂಪತ್ಯ ನಡೆಸುತ್ತಿದ್ದು, ತಮ್ಮ ಇಬ್ಬರು ಮಕ್ಕಳಾದ ಡಾ.ಶ್ರೇಯ ಹೆಗ್ಡೆ ಮತ್ತು ಡಾ. ಶೌರ್ಯ ಹೆಗಡೆ ಅವರು ಸಹ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂಡುಬಿದಿರೆ ರೋಟರಿ ಕ್ಲಬ್ಬಿನ ಸ್ಥಾಪಕ ಸದಸ್ಯರಾಗಿರುವ ಇವರು ಇಂದಿಗೂ ಸಕ್ರಿಯ ಸದಸ್ಯರಾಗಿ ಎಲ್ಲ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಬಂದಿರುವುದು ಇವರ ಬದ್ಧತೆಯ ಸಂಕೇತವಾಗಿದೆ. ಅರ್ಧ ಶತಮಾನಕ್ಕಿಂತಲೂ ಹೆಚ್ಚು ಸಮಯದಿಂದ ಮೂಡುಬಿದಿರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಇವರು ಈ ಪರಿಸರದ ಸುತ್ತಮುತ್ತಲಿನ ಪ್ರದೇಶದ ಎಲ್ಲಾ ಕಾರ್ಯಕ್ರಮಗಳಿಗೆ ಆರ್ಥಿಕ ಸಹಕಾರವನ್ನು ನೀಡುತ್ತಾ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದಾರೆ.
ತಮ್ಮ ನೇರ ನಡೆ-ನುಡಿ ಮತ್ತು ನಯ ವಿನಯದಿಂದ ಕೂಡಿದ ಮಾತಿನ ಶೈಲಿ ಅವರ ವ್ಯಕ್ತಿತ್ವಕ್ಕೆ ಭೂಷಣ ಪ್ರಾಯವಾದುದಾಗಿದೆ. ಮೂಡುಬಿದಿರೆಯ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಿರುವ ಇವರಿಗೆ ಇನ್ನಷ್ಟು ಜನ ಸೇವೆಯನ್ನು ಮಾಡುವ ಭಾಗ್ಯ ಲಭಿಸಲಿ. ದಂತ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸುವ ಭಾಗ್ಯ ಇವರಿಗೆ ಲಭಿಸಲಿ ಎಂದು ಹಾರೈಸುತ್ತಾ ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ ಮೂಡುಬಿದಿರೆ ಈ ಸಂಸ್ಥೆಯ ವತಿಯಿಂದ
ಸಿರಿಪುರ ಪ್ರಶಸ್ತಿ – 2025 ನೀಡಿ ತಮ್ಮನ್ನು ಗೌರವಿಸುತ್ತಿದ್ದೇವೆ.

ಮೂಡು ವೇಣುಪುರದ ಪೂನ್ನೆಚಾರಿ ಶ್ರೀ ಶಾರದ ಮಾತೆ ಮತ್ತು ಸಿರಿಪುರದ ಯಲಗೇಶ ದೇವ ಜಗದೀಶ ನಿಮಗೆ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿ ಕೊಡಲಿ, ಮೂಡುಬಿದಿರೆಯ ಎಲ್ಲಾ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಚಟುವಟಿಕೆಗಳಿಗೆ ನಿಮ್ಮ ಸಹಾಯ ಸಹಕಾರ ಪ್ರೋತ್ಸಾಹ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸುತ್ತಾ ಅಭಿನಂದಿಸುತ್ತಿದ್ದೇವೆ.

ವಂದನೆಗಳೊಂದಿಗೆ
ಶ್ರೀ ಕೆ. ಶ್ರೀಪತಿ ಭಟ್
ಗೌರವಾಧ್ಯಕ್ಷರು
ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ
ಮೂಡುಬಿದಿರೆ.

ಡಾ. ರಾಮಕೃಷ್ಣ ಶಿರೂರು
ಅಧ್ಯಕ್ಷರು
ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ
ಮೂಡುಬಿದಿರೆ.

ಶ್ರೀಮತಿ ನಾಗರತ್ನ ಶಿರೂರು
ಪ್ರಧಾನ ಕಾರ್ಯದರ್ಶಿ
ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ
ಮೂಡುಬಿದಿರೆ.

LEAVE A REPLY

Please enter your comment!
Please enter your name here