ಮುಂಬಯಿ:ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು. ಬಾಸೆಲ್ ಮಿಶನ್ ವರದಿಯಲ್ಲಿ ದಾಖಲಾಗಿರುವ ಬಿಲ್ಲವರ ಕುರಿತು ಓದಿ ಆಸಕ್ತಿಯಿಂದ ಅಧ್ಯಯನವನ್ನು ನಡೆಸುತ್ತಿರುವೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಮಂಗಳೂರಿಗೆ ಭೇಟಿ ನೀಡುತ್ತಿದ್ದೇನೆ. ತಳಮಟ್ಟಕ್ಕೆ ತಳ್ಳಲ್ಪಟ್ಟ ಬಿಲ್ಲವ ಸಮಾಜವು ನಾರಾಯಣ ಗುರುಗಳ ಪ್ರೇರಣೆಯಿಂದ ಹೇಗೆ ಉನ್ನತಿಯನ್ನು ಕಂಡಿತು ಎಂದು ತಿಳಿಯುವುದು ನನ್ನ ಅಧ್ಯಯನದ ಮುಖ್ಯ ಉದ್ದೇಶವಾಗಿದೆ ಎಂಬುದಾಗಿ ಸ್ವಿಟ್ಜರ್ಲ್ಯಾಂಡ್‌ನ ಜುರಿಕ್ ವಿಶ್ವವಿದ್ಯಾಲಯದ ಸಂಶೋಧಕ,ಸಹಾಯಕ ಪ್ರಾಧ್ಯಾಪಕರಾದ ಡಾ. ಮುಕೇಶ್ ಕುಮಾರ್ ಅವರು ನುಡಿದರು.
ಅವರು, ಜುಲೈ ೧೪ರಂದು ಸೋಮವಾರ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಿಲ್ಲವರಲ್ಲಿ ಜಾತಿ ಧರ್ಮ ಮತ್ತು ಸಾಮಾಜಿಕ ಚಲನಶೀಲತೆಯ ಸಮಸ್ಯೆಗಳ ಪರಿಹಾರ’ ಈ ವಿಷಯದ ಕುರಿತು ಅಧ್ಯಯನವನ್ನು ಕೈಗೊಂಡಿರುವ ಮುಕೇಶ್ ಕುಮಾರ್ ಅವರು ಕನ್ನಡ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಿಲ್ಲವ ಸಮುದಾಯ ಕಳೆದ ನೂರು ವರ್ಷಗಳಲ್ಲಿ ಮಾಡಿರುವ ಸಾಧನೆ ಅಪಾರ. ಇಲ್ಲಿ ಪ್ರಗತಿಪರ ಚಿಂತಕ
ದಾರ್ಶನಿಕ ನಾರಾಯಣ ಗುರುಗಳ ಪಾತ್ರ ಘನವಾದದ್ದು. ಮುಂಬೈನ ಬಿಲ್ಲವರ ನಾನಾ ಮುಖಗಳ ಸಾಧನೆಯನ್ನು ಕಳೆದ ಒಂದೂವರೆ ತಿಂಗಳಿಂದ ಅಧ್ಯಯನ ಮಾಡುತ್ತಿದ್ದೇನೆ. ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನನ್ನ ಸಂಶೋಧನೆಯ ಹಿನ್ನೆಲೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಸಿಕ್ಕಿದೆ. ಕನ್ನಡ ವಿಭಾಗದ ಶೈಕ್ಷಣಿಕ ಚಟುವಟಿಕೆಗಳು ಸಮುದಾಯವನ್ನು ಬೆಸೆಯುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂಬುದಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇನ್ನೋರ್ವ ಅಥಿತಿಯಾಗಿ ಆಗಮಿಸಿದ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಪೃಥ್ವಿ ರಾಜ್ ಕವತ್ತಾರ್ ಅವರು, ಕಳೆದ ಹಲವಾರು ವರ್ಷಗಳಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಅಕಾಡೆಮಿಕ್ ಎಂದರೆ ಸಮಾಜದಿಂದ ದೂರವಾದ ವಾತಾವರಣ ಎಂದು ನಾವು ಭಾವಿಸುತ್ತೇವೆ. ಪ್ರೊ. ಉಪಾಧ್ಯ ಅವರು ಶಿಕ್ಷಣ ಮತ್ತು ಸಮಾಜವನ್ನು ಒಂದೆಡೆ ಸೇರಿಸಿಕೊಂಡು ಸೌಹಾರ್ದಯುತವಾಗಿ ಮುನ್ನಡೆಯುತ್ತಿದ್ದಾರೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಕನ್ನಡ ವಿಭಾಗಗಳಿವೆ. ಆದರೆ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವು ತುಂಬ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿಭಾಗದ ಸಾಧನೆಯನ್ನು ಪ್ರಶಂಸಿಸಿದರು.
ಶೋಧನೆ ಎನ್ನುವುದು ನಿರಂತರವಾದ ಒಂದು ಪ್ರಕ್ರಿಯೆ ಎಂಬ ಮಾತಿದೆ. ಸಮಾಜದ ವಿಭಿನ್ನ ನೆಲೆಗಳ ಬೆಳವಣಿಗೆಯನ್ನು ಗುರುತಿಸಿ ಕಾಲಕಾಲಕ್ಕೆ ಮೌಲ್ಯಮಾಪನ ಮಾಡುವ ಶೋಧ ಕಾರ್ಯ ಅನಿವಾರ್ಯ. ಡಾ.ಮುಕೇಶ್ ಕುಮಾರ್ ಅವರು ಅಂತಾರಾಷ್ಟ್ರೀಯ ನೆಲೆಯಲ್ಲಿ ಸ್ವಿಜರ್ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಬಿಲ್ಲವ ಸಮುದಾಯದ ಒಂದು ಶತಮಾನದ ಏಳುಬೀಳುಗಳ ಕಥನವನ್ನು ಅಧಿಕೃತ ದಾಖಲೆಗಳೊಂದಿಗೆ ಕಟ್ಟಿಕೊಡಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಅವರ ಪ್ರಯತ್ನ ಸಂಶೋಧನ ಆಸಕ್ತಿ ಯುವತಲೆಮಾರಿಗೆ ಅನುಕರಣೀಯ ಅಂಶ, ಹೆಮ್ಮೆ ಪಡುವ ಸಂಗತಿ ಎಂಬುದಾಗಿ ಈ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊ. ಜಿ. ಎನ್ ಉಪಾಧ್ಯ ಅವರು ಅಭಿಪ್ರಾಯಪಟ್ಟರು. ಮುಂಬಯಿಗೆ ವಲಸೆ ಬಂದ ಮೊಗವೀರ ಸಮುದಾಯದ ಕುರಿತು ಈಗಾಗಲೇ ಡಾ.ಜಿ.ಪಿ.ಕುಸುಮ ಅವರು ಅಧ್ಯಯನ ಮಾಡಿದ್ದಾರೆ. ಅನಿತಾ ಪೂಜಾರಿಯವರು ಮುಂಬಯಿಯ ಬಿಲ್ಲವರ ಯಶೋಗಾಥೆಯನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ಸಂಶೋಧನ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಯಾವುದೇ ಮೀಸಲಾತಿ ಮತ್ತೊಂದು ಮೊಗದೊಂದು ಸೌಲಭ್ಯ ಇಲ್ಲದೆಯೂ ಈ ತಳ ಸಮುದಾಯಗಳು ಮುಂಬಯಿಯಲ್ಲಿ ಮಾಡಿದ ಸಾಹಸಕಾರ್ಯ ಬೆರಗು ಹುಟ್ಟಿಸುತ್ತದೆ. ಇದು ನಾಡಿಗೆ ಮಾದರಿ. ಇದನ್ನು ದಾಖಲಿಸುವ ಕೆಲಸವನ್ನು ಕನ್ನಡ ವಿಭಾಗ ನಿರಂತರವಾಗಿ ಮಾಡುತ್ತಾ ಬಂದಿದೆ. ಡಾ ಮುಕೇಶ್ ಕುಮಾರ್ ಅವರು ಕನ್ನಡ ವಿಭಾಗವನ್ನು ಹುಡುಕಿಕೊಂಡು ಬಂದಿರುವುದು ಖುಷಿಕೊಟ್ಟ ಸಂಗತಿ. ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಪೃಥ್ವಿರಾಜ್ ಕವತ್ತಾರು ಅವರು ಸಹ ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ. ನೆಲಮೂಲದ ನಮ್ಮ ಸಂಸ್ಕೃತಿಯನ್ನು ನಾವು ಕಡೆಗಣಿಸಬಾರದು. ಇತಿಹಾಸವೆಂದರೆ ಹಳೆಯದು ಮಾತ್ರವಲ್ಲ. ವರ್ತಮಾನದ ವಿದ್ಯಮಾನಗಳು ಸಹ ದಾಖಲಾಗುತ್ತಾ ಹೋಗಬೇಕು ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.
ಡಾ. ಮುಕೇಶ್ ಕುಮಾರ್, ಡಾ ಪೃಥ್ವಿರಾಜ್ ಕವತ್ತಾರು ಅವರನ್ನು ಇದೇ ಸಂದರ್ಭದಲ್ಲಿ ಮುಂಬೈ ವಿಶ್ವವಿದ್ಯಾಲಯದ ಪರವಾಗಿ ಶಾಲು ಹೊಂದಿಸಿ ಗ್ರಂಥ ಗೌರವ ನೀಡಿ ಸನ್ಮಾನಿಸಲಾಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಖ್ಯಾತ ಭಾಗವತರಾದ ವಾಸುದೇವ ಎರ್ಮಾಳ್ ಹಾಗೂ ದೇಲಂತಮಜಲು ಸುಬ್ರಮಣ್ಯ ಭಟ್ ಅವರನ್ನು ವಿಭಾಗದ ಪರವಾಗಿ ಗೌರವಿಸಲಾಯಿತು. ಪಿಎಚ್.ಡಿ ಅಧ್ಯಯನಕ್ಕೆ ಹೊಸದಾಗಿ ಸೇರ್ಪಡೆಯಾದ ಸವಿತಾ ಅರುಣ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಕೃತಿ ಪುಷ್ಪ ಗೌರವ ನೀಡುವ ಮೂಲಕ ಸ್ವಾಗತಿಸಲಾಯಿತು. ಸುರೇಖಾ ದೇವಾಡಿಗ, ಕರುಣಾಕರ ಕಾಪು, ಆಶಾ ಸುವರ್ಣ, ದಯಾಶಶಿ ಉಷಾ ಶೆಟ್ಟಿ ಮೊದಲಾದವರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಸಂಶೋಧನ ವಿದ್ಯಾರ್ಥಿಯಾದ ಪ್ರತಿಭಾ ರಾವ್ ಅವರು ನಿರೂಪಿಸಿದರು. ಅನಿತಾ ಪೂಜಾರಿ ಅವರು ವಂದಿಸಿದರು.