ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಉಪಾಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆ

0
8

ಉಡುಪಿ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ಕೆ.ಎಸ್.ಹೆಚ್.ಎ.)ದ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಖ್ಯಾತ ಹೋಟೆಲು ಉದ್ಯಮಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಕೆ.ಎಸ್.ಹೆಚ್.ಎ. ಕಾರ್ಯಕಾರಿ ಸಮಿತಿಯ ಇತ್ತೀಚಿನ ಸಭೆಯಲ್ಲಿ ಪ್ರಸಕ್ತ ಸಾಲಿನ ಅವಧಿಗೆ ಒಕ್ಕೊರಲಿನ ಆಯ್ಕೆಯ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಯಿತು.

1954ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘವು ರಾಜ್ಯದ 30 ಜಿಲ್ಲೆಗಳ ಹೋಟೆಲ್ ಸಂಘಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಅತ್ಯುನ್ನತ ಸಂಸ್ಥೆಯಾಗಿದ್ದು, ರಾಜ್ಯದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಅಧಿಕ ದರ್ಶಿನಿ, ಮಧ್ಯಮ ಹಾಗೂ ಸ್ಟಾರ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಪ್ರತಿನಿಧಿಸುತ್ತದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋಟೆಲ್ ಉದ್ಯಮವನ್ನು ಬೆಂಬಲಿಸುವಲ್ಲಿ ಕೆ.ಎಸ್.ಹೆಚ್.ಎ. ಪ್ರಮುಖ ಪಾತ್ರ ವಹಿಸುತ್ತಿದೆ.

ಹೋಟೆಲ್ ಉದ್ಯಮದ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ, ಅವರ ಮೇಲೆ ಅವಲಂಬಿತ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಈ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಜೊತೆಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕೆ.ಎಸ್.ಹೆಚ್.ಎ. ಸದಸ್ಯರು ಪ್ರಮುಖ ಪಾಲುದಾರರಾಗಿದ್ದಾರೆ.

ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಆಯ್ಕೆಯು ಕರಾವಳಿ ವಿಭಾಗದಲ್ಲಿ ಹೋಟೆಲ್ ಉದ್ಯಮದ ಗಣನೀಯ ಅಭಿವೃದ್ಧಿಗೆ, ವಲಯದಲ್ಲಿರುವ ಕುಂದು-ಕೊರತೆಗಳ ಪರಿಹಾರಕ್ಕೆ ಹಾಗೂ ಸಂಘದ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ನೀಡಲಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಆಶಾಭಾವ ವ್ಯಕ್ತಪಡಿಸಿ ಅಭಿನಂದಿಸಿದೆ.

ಡಾ. ತಲ್ಲೂರು ಅವರು ಪ್ರಸ್ತುತ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ರಂಗಭೂಮಿ ಉಡುಪಿ ಅಧ್ಯಕ್ಷರು ಸೇರಿದಂತೆ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಪಾತ್ರ ವಹಿಸಿಕೊಂಡಿದ್ದಾರೆ.

ಸಮಾಜ ಸೇವೆ ಹಾಗೂ ಕಲಾರಾಧನೆಯಲ್ಲಿ ಅಪಾರ ಕೊಡುಗೆ ನೀಡಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಕರ್ನಾಟನ ಜಾನಪದ ವಿಶ್ವವಿದ್ಯಾಲಯವು 2022ನೇ ಸಾಲಿನ ‘ಗೌರವ ಡಾಕ್ಟರೇಟ್’ ಪ್ರದಾನ ಮಾಡಿದೆ. ಅಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತುರುವೆ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಸಾಧಕರ ರತ್ನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳು ಲಭಿಸಿವೆ.

LEAVE A REPLY

Please enter your comment!
Please enter your name here