ಡಾ. ವೆಂಕಟೇಶ್ ಬಾಬು ಅವರಿಗೆ ‘ಸರಸ್ವತಿ ಕನ್ನಡ ರತ್ನ’ ರಾಜ್ಯ ಪ್ರಶಸ್ತಿ

0
31

ದಾವಣಗೆರೆ : ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತಿರುವ ಡಾ. ವೆಂಕಟೇಶ್ ಬಾಬು ಅವರಿಗೆ ಪ್ರತಿಷ್ಠಿತ “ಸರಸ್ವತಿ ಕನ್ನಡ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಸಾಲಿಗ್ರಾಮ ಗಣೇಶ ಶೆಣೈ ಅವರು ತಿಳಿಸಿದ್ದಾರೆ.

ಡಾ. ವೆಂಕಟೇಶ್ ಬಾಬು ಎಸ್ ಅವರು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಸಂಶೋಧನೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಇದುವರೆಗೆ 33ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದು, ವಾಣಿಜ್ಯ, ಸ್ಪರ್ಧಾತ್ಮಕ ಪರೀಕ್ಷೆಗಳು, ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗ ಮತ್ತು ಸ್ವ ಉದ್ಯೋಗ, ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿವೆ.

ಅವರು 254ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ಉದ್ಯೋಗಾವಕಾಶಗಳು, ಹಾಗೂ ಕೌಶಲ್ಯಾಧಾರಿತ ತರಬೇತಿ ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ. ವಿಶೇಷವಾಗಿ ಯುವಜನತೆಗೆ ಉದ್ಯೋಗಮುಖಿ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆಯ ಮಹತ್ವವನ್ನು ತಿಳಿಸುವಲ್ಲಿ ಅವರ ಯಶಸ್ಸು ನಿಮ್ಮ ಕೈಯಲ್ಲಿದೆ ಎಂಬ ಭಾಷಣವು ವಿದ್ಯಾರ್ಥಿಗಳನ್ನು ಪ್ರೇರೆಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿರುತ್ತದೆ.

ಡಾ. ವೆಂಕಟೇಶ್ ಬಾಬು ಅವರು ಕರ್ನಾಟಕದ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ 200ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದು, ವ್ಯಕ್ತಿತ್ವ ವಿಕಸನ, ಸಾಧನೆಯ ಸೂತ್ರಗಳು ಗೆಲುವಿನ ಮಂತ್ರಗಳು ಪದವಿ ನಂತರದ ಅವಕಾಶಗಳು, ಹಾಗೂ ಜೀವನ ಮಾರ್ಗದರ್ಶನದಂತಹ ವಿಷಯಗಳ ಮೇಲೆ ಜನಪ್ರಿಯ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ಗುರಿನಿರ್ಧಾರವನ್ನು ಬೆಳೆಸುವಲ್ಲಿ ಅವರ ಬೋಧನಾ ಶೈಲಿ ವಿಶೇಷವಾಗಿದೆ. ಅವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ವೃತ್ತಿಪರವಾಗಿ ಸಾಧನೆ ಮಾಡಿದ್ದಾರೆ.

ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ “ಸರಸ್ವತಿ ಕನ್ನಡ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಲಿಗ್ರಾಮ ಗಣೇಶ ಶೆಣೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 19 ರಂದು ನಡೆಯಲಿದ್ದು, ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಈ ಸಾಧನೆಗೆ ಶಿಕ್ಷಣ ವಲಯ, ಕುಟುಂಬದ ಸದಸ್ಯರು ಸ್ನೇಹಿತರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here