ಬೆಂಗಳೂರು : ಡ್ರಂಕ್ ಆಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ದ ಚಾಲಕನೊಬ್ಬ ಲಾರಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ಸಂಭವಿಸಿದೆ.
ಷಣ್ಮುಗ ಮೃತ ಲಾರಿ ಚಾಲಕ. ಪೊಲೀಸರು ಡ್ರಿಂಗ್ ಆಂಡ್ ಡ್ರೈವ್ ತಪಾಸಣೆ ವೇಳೆ ಷಣ್ಮುಗ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ.
ಹೀಗಾಗಿ ಪೊಲೀಸರು, ಚಾಲಕ ಷಣ್ಮುಗಗೆ ದಂಡ ವಿಧಿಸಿ ಬಳಿಕ ಲಾರಿಯನ್ನು ಜೆ.ಪಿ.ನಗರ ಠಾಣೆಗೆ ಎಳೆದೊಯ್ದಿದ್ದಾರೆ. ಮನನೊಂದ ಚಾಲಕ ಷಣ್ಮುಗ ಠಾಣೆಯ ಬಳಿ ನಿಲ್ಲಿಸಿದ್ದ ಲಾರಿಯಲ್ಲೇ ನೇಣು ಬಿಗಿದುಕೊಂಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಏಪ್ರಿಲ್ 4ರಂದು ರಾತ್ರಿ ಜೆ.ಪಿ ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಲಾರಿ ಚಾಲಕ ಷಣ್ಮುಗ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ಆತನನ್ನು ತಡೆದ ಪೊಲೀಸರು ಬ್ರೀತ್ ಅನಲೈಸರ್ ಮೂಲಕ ತಪಾಸಣೆ ನಡೆಸಿದಾಗ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ.
ಇದಾದ ನಂತರ ಪೊಲೀಸರು ನಿಯಮದಂತೆ ಷಣ್ಮುಗನಿಗೆ ಭಾರೀ ಮೊತ್ತದ ದಂಡ ವಿಧಿಸಿದ್ದಾರೆ. ಅಲ್ಲದೆ, ಮದ್ಯದ ಅಮಲಿನಲ್ಲಿದ್ದ ಚಾಲಕನಿಗೆ ವಾಹನ ಚಲಾಯಿಸಲು ಬಿಡದ ಪೊಲೀಸರು, ಲಾರಿಯನ್ನು ವಶಕ್ಕೆ ಪಡೆದು ಜೆ.ಪಿ ನಗರ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದರು. ಬಳಿಕ ಚಾಲಕ ಷಣ್ಮುಗ ಅದೇ ಲಾರಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಇಂದು ಬೆಳಿಗ್ಗೆ ಗಮನಿಸಿದಾಗ ಚಾಲಕ ಲಾರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ.

