ಕಲಬುರಗಿ: ಡ್ರಗ್ಸ್ ಸಾಗಾಣಿಕೆ ಕೇಸ್ಗೆ ಸಂಬಂಧಿಸಿದಂತೆ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಲಿಂಗರಾಜ್ ಕಣ್ಣಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಬಜಾರ್ ಪೇಠ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಮಾದಕ ದ್ರವ್ಯ ವಸ್ತುಗಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಲಿಂಗರಾಜ ಕಣ್ಣಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.
ಪ್ರಕರಣದ ವಿವರ
ವರದಿ ಪ್ರಕಾರ, ಲಿಂಗರಾಜ ಕಣ್ಣಿ ಅವರು ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಿಷೇಧಿತ 120 ಕೊಡೆನೈನ್ ಸಿರಪ್‌ನೊಂದಿಗೆ ಮಾದಕ ದ್ರವ್ಯ ಮಾರಾಟ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮುಂಬೈ ಪೊಲೀಸರು NDPS (ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್) ಕಾಯ್ದೆಯಡಿ ಲಿಂಗರಾಜ ಕಣ್ಣಿ ಅವರನ್ನು ಬಂಧಿಸಿದ್ದಾರೆ. ಈ ಘಟನೆಯು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್‌ನಿಂದ ತಕ್ಷಣದ ಕ್ರಮ
ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ಅವರು ಲಿಂಗರಾಜ ಕಣ್ಣಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಜಗದೇವ್ ಗುತ್ತೇದಾರ್ ಹೇಳಿಕೆಯಲ್ಲಿ, “ಪಕ್ಷದ ಘನತೆ ಮತ್ತು ಕಾನೂನಿನ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಲಿಂಗರಾಜ ಕಣ್ಣಿ ಅವರಿಗೆ ಕಾಂಗ್ರೆಸ್ ಪಕ್ಷದ ಯಾವುದೇ ಸ್ಥಾನಮಾನಗಳು ಅಥವಾ ಸದಸ್ಯತ್ವವು ಇನ್ಮುಂದೆ ಇರುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.