ದುಬೈ : ಕಳೆದ ರವಿವಾರ ದುಬಾಯಿ ಗೀಸೈಸ್ ನ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಯಕ್ಷಗಾನ ಮತ್ತು ಕನ್ನಡಾಭಿಮಾನಿಗಳ ಸಮ್ಮುಖ ಸಾಂಗವಾಗಿ ನಡೆಯಿತು.ಪುತ್ತಿಗೆ ವಾಸುದೇವ ಭಟ್,ವೀನಸ್ ಗ್ರೂಪ್ ಮಾಲಕರು ಇವರ ನೇತೃತ್ವದಲ್ಲಿ, ಶಿವರಾಜ್ ಭಟ್, ವೆಂಕಟೇಶ ಶಾಸ್ತ್ರಿ ಪುತ್ತಿಗೆ,ಸಂತೋಷ್ ರಾವ್ ಎರ್ಮಾಳ್ ಇವರ ಪೌರೋಹಿತ್ಯದಲ್ಲಿ ಮುಹೂರ್ತ ಪೂಜೆಯ ಸರ್ವ ವಿಧಿ ವಿಧಾನಗಳು ಸಂಪನ್ನಗೊಂಡವು.
ದುಬಾಯಿಯ ಶ್ರೀ ರಾಜರಾಜೇಶ್ವರಿ ಭಜನಾ ವೃಂದ ಮತ್ತು ಕೇಂದ್ರದ ಸದಸ್ಯರ ಭಾಗವಹಿಸುವಿಕೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.
ಮುಂದೆ ಕೇಂದ್ರದ ಕಲಾವಿದರಿಂದ, ಸ್ತುತಿ ಪದ್ಯ, ಗೆಜ್ಜೆ ಧಾರಣೆ, ಚೌಕಿಪೂಜೆ, ರಂಗಸ್ಥಳಕ್ಕೆ ದೇವರು ಮತ್ತು ಜೂನ್ 21ರಂದು ನಡೆಯಲಿರುವ ದುಬಾಯಿ ಯಕ್ಷೋತ್ಸವ ಸಂಬಂಧಿ ಯಕ್ಷಗಾನ ಪ್ರಸಂಗಾಭ್ಯಾಸಾರಂಭಕ್ಕೆ ಚಾಲನೆ ನೀಡಲಾಯಿತು. ಕೇಂದ್ರದ ಹಿರಿಯ-ಕಿರಿಯ, ನೂತನ ಕಲಾವಿದರು ಸೇರಿ ಗೆಜ್ಜೆ ಸೇವೆ ನಡೆಸಿದರು. ವೆಂಕಟೇಶ ಶಾಸ್ತ್ರಿಯವರು ಅರ್ಚಕರ ಬಳಗ ಮತ್ತು ಹಿರಿಯ ಕಲಾವಿದರ ನೆಲೆಯಲ್ಲಿ, ಪ್ರಸಂಗಭ್ಯಾಸಾರಂಭ ಪ್ರಯುಕ್ತ ಶುಭಸಂದೇಶ ನೀಡಿ ಮಾತನಾಡಿದರು.

ವಾಸು ಶೆಟ್ಟಿ ಅಧ್ಯಕ್ಷರು ಗಮ್ಮತ್ ಕಲಾವಿದರು ದುಬಾಯಿ, ಜಯಾನಂದ ಪಕ್ಕಳ ಕೇಂದ್ರದ ಹಿರಿಯ ಸದಸ್ಯ, ಸುವರ್ಣ ಪ್ರತಿಷ್ಟಾನ ಕರ್ನಿರೆ ಇದರ ಸ್ಥಾಪಕರಾದ ಪ್ರಭಾಕರ ಸುವರ್ಣ,ಪದ್ಮಶಾಲಿ ಸಮಾಜದ ವತಿಯಿಂದ ವರದರಾಜ್ ಶೆಟ್ಟಿಗಾರ್, ದುಬಾಯಿ ಕರ್ನಾಟಕ ಸಂಘದ ಮನೋಹರ ಹೆಗ್ಡೆ, ಜಯಂತ ಶೆಟ್ಟಿ,ಮಾಧ್ಯಮ ಮಿತ್ರರಾದ ಸಂತೋಷ್ ಕುಮಾರ್ ಪೊಳಲಿ, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮೊದಲಾದವರ ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇರಿದ ಆಡ್ಯಗಣ್ಯರು ಶುಭನುಡಿಗಳ ಮೂಲಕ ಸರ್ವ ಕಲಾಭಿಮಾನಿಗಳ ಸಹಕಾರ ಘೋಷಿಸಿದರು.

ಕೇಂದ್ರದ ಸಂಚಾಲಕರಾದ ದಿನೇಶ ಶೆಟ್ಟಿ ಕೊಟ್ಟಿಂಜ,ದುಬಾಯಿ ಯಕ್ಷೋತ್ಸವದ ಕುರಿತಾದ ಮಾಹಿತಿಗಳನ್ನು ಸಭೆಗೆ ನೀಡಿ, ಕೇಂದ್ರದ ಕಲಾವಿದರ ಶ್ರಮಕ್ಕೆ ಸರ್ವಕಲಾಭಿಮಾನಿಗಳ ಸಹಕಾರ ಯಾಚಿಸಿದರು. ಕೇಂದ್ರದ ಮುಖ್ಯ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿಯವರು ಮಾತನಾಡಿ ದುಬಾಯಿ ಯಕ್ಷೋತ್ಸವ ಪ್ರಯುಕ್ತ ನಡೆಯಲಿರುವ “ಶ್ರೀ ಹರಿ ಲೀಲಾಮೃತ” ಯಕ್ಷಗಾನ ಪ್ರದರ್ಶನದ ಮಾಹಿತಿ ನೀಡಿದರು. ಶ್ರೀಯುತ ಗಿರೀಶ್ ನಾರಾಯಣ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮಹಾಮಂಗಳಾರತಿಯ ನಂತರ ಪ್ರೀತಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

