ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ; ನಿಂತಿದ್ದ ಲಾರಿಗೆ ಕೆಎಸ್​​ಆರ್​​ಟಿಸಿ ಬಸ್ ಡಿಕ್ಕಿ; ಕೆಲಸದ ನಿಮಿತ್ತ ಮಂಗಳೂರಿಗೆ ಹೊರಟಿದ್ದ ಮೂವರ ಸಾವು

0
198

ಕಾರವಾರ: ನಿಂತಿದ್ದ ಲಾರಿಗೆ ಕೆಎಸ್​​ಆರ್​​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು  7 ಜನರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್​ನಲ್ಲಿ ನಡೆದಿದೆ. ಓವರ್​ಟೇಕ್​ ಮಾಡುವ ಸಂದರ್ಭದಲ್ಲಿ ಬಸ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಫಘಾತ ಸಂಭವಿಸಿದೆ. ಮೃತ ಮೂವರು ಬಾಗಲಕೋಟೆ ಮೂಲದವರು. ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬಸ್ ಚಾಲಕನ ಮೇಲೆ ಪ್ರಕರಣ ದಾಖಲು

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನಿಲವ್ವ ಹರದೊಳ್ಳಿ (40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಮತ್ತು ಇನ್ನೋರ್ವ 45 ವರ್ಷದ ವ್ಯಕ್ತಿ (ಹೆಸರು ಪತ್ತೆ ಆಗಿಲ್ಲ) ಮೃತರು. ಇನ್ನು ಗಾಯಗೊಂಡ 7 ಜನರು ಬಾಗಲಕೋಟೆ ಮೂಲದವರು ಎಂದು ತಿಳಿದು ಬಂದಿದೆ. ಚಿಕ್ಕಚಿಕ್ಕ ಮಕ್ಕಳಿಗೂ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಲಮಟ್ಟಿ ಗ್ರಾಮದ ಯಮನಪ್ಪ ಮಾಗಿ ಬಸ್ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.

ಬಾಗಲಕೋಟೆಯಿಂದ ಮಂಗಳೂರು ಕಡೆಗೆ KA 19F 3470 ನಂಬರ್​ನ ಕೆಎಸ್​​ಆರ್​​ಟಿಸಿ ಬಸ್​​ ತೆರಳುತ್ತಿತ್ತು. ಯಲ್ಲಾಪುರ ಅಂಕೋಲಾ ರಸ್ತೆ ದಟ್ಟ ಕಾಡು ಹಾಗೂ ಘಟ್ಟ ಪ್ರದೇಶದಿಂದ ಕೂಡಿದ ಡೆಂಜರ್ ಹೆದ್ದಾರಿ ಆಗಿದೆ. ಓವರ್​ಟೇಕ್​ ಮಾಡುವ ಸಂದರ್ಭದಲ್ಲಿ ರಸ್ತೆಯಂಚಿನಲ್ಲಿ ನಿಂತಿದ್ದ ಕೇರಳ ಮೂಲದ ಲಾರಿಗೆ ಬಸ್​ ಡಿಕ್ಕಿ ಹೊಡೆದಿದೆ. ಚಾಲಕ ಇಂಡಿಕೇಟರ್​ ಹಾಕದೆ ಕತ್ತಲೆಯಲ್ಲಿ ಲಾರಿ ನಿಲ್ಲಿಸಿದ್ದ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್​ನ ಒಂದು ಬಂದಿ ಸಂಪೂರ್ಣ ನಜ್ಜು ಗುಜ್ಜಾಗಿದೆ.

ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆ ಮೂಲದ ಮೃತ ಮೂವರು ಕೆಲಸದ ನಿಮಿತ್ತ ಮಂಗಳೂರಿಗೆ ಹೊರಟಿದ್ದರು. ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ, ಪಿಎಸ್ ಐ ಯಲ್ಲಾಲಿಂಗ್ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತರ ದೇಹವನ್ನ ಯಲ್ಲಾಪುರ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here