ಎಂಟು ಮಂದಿ ಶಂಕಿತ ಉಗ್ರರ ಬಂಧನ..!

0
7

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಮತ್ತೊಂದು ಉಗ್ರ ದಾಳಿಗೆ ಸಂಚು ರೂಪಿಸಲಾಗುತ್ತಿದೆ ಎನ್ನುವ ಗುಪ್ತಚರ ಮಾಹಿತಿ ಬರುತ್ತಿರುವ ಬೆನ್ನಲ್ಲೇ ಎಂಟು ಮಂದಿ ಉಗ್ರ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಎಂಟು ಮಂದಿಯನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಆರು ಮಂದಿ ಶಂಕಿತರು ಬಂಧಿತರಾದರೆ, ಪಶ್ಚಿಮ ಬಂಗಾಳದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನಲ್ಲಿ ಬಂಧಿತರಾದ ಆರು ಮಂದಿ ಶಂಕಿತ ಉಗ್ರರನ್ನು ಮಿಜಾನುರ್ ರಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹೀದ್ ಮತ್ತು ಮೊಹಮ್ಮದ್ ಉಜ್ಜಲ್ ಎಂದು ಹೇಳಲಾಗಿದೆ. ಈ ಆರೋಪಗಳು ನಕಲಿ ಆಧಾರ್ ಕಾರ್ಡ್ ಅನ್ನು ಬಳಸಿದ್ದಾರೆ. ಈ ಎಂಟು ಮಂದಿಯಲ್ಲಿ ಒಬ್ಬಾತ ಬಾಂಗ್ಲಾದೇಶದ ನಾಗರಿಕ ಎನ್ನಲಾಗಿದೆ.

ತಮಿಳುನಾಡು ಪೊಲೀಸರು ಶಂಕಿತರನ್ನು ಬಂಧಿಸಿದ್ದು ದೆಹಲಿ ಪೊಲೀಸರಿಗೆ ಅವರನ್ನು ಒಪ್ಪಿಸುತ್ತಿದ್ದಾರೆ. ಆರೋಪಿಗಳಿಂದ ಹತ್ತಕ್ಕೂ ಹೆಚ್ಚು ಮೊಬೈಲ್ ಫೋನ್​ಗಳು ಹಾಗೂ 16 ಸಿಮ್ ಕಾರ್ಡ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೆಹಲಿಯ ಕೆಂಪು ಕೋಟೆ ಹಾಗು ದೇಶದ ವಿವಿಧೆಡೆ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಪಾಕಿಸ್ತಾನದ ಲಷ್ಕರೆ ತೈಬಾ ಸಂಘಟನೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಮಾಹಿತಿ ಎಚ್ಚರಿಸಿದೆ. ಫೆಬ್ರುವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ಮಸೀದಿಯೊಂದರಲ್ಲಿ ಸಂಭವಿಸಿದ ಆತ್ಮಹತ್ಯಾ ದಾಳಿಗೆ ಪ್ರತೀಕಾರವಾಗಿ ಭಾರತದಲ್ಲಿ ಬಾಂಬ್ ದಾಳಿಗೆ ಸಂಚು ರೂಪಿಸಲಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಫೆ. 6 ಬಾಂಬ್ ದಾಳಿ ಘಟನೆಗೆ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಆದರೆ, ಭಾರತದ ಮೇಲೆ ಉಗ್ರರು ಪ್ರತೀಕಾರ ತೀರಿಸಿಕೊಳ್ಳಲು ಮುಂದಾದಂತಿದೆ.

ಮೂರು ತಿಂಗಳ ಹಿಂದೆ, ನವೆಂಬರ್ 10ರಂದು ಕೆಂಪು ಕೋಟೆಯಲ್ಲಿ ಕಾರ್ ಬಾಂಬ್ ಅನ್ನು ಉಗ್ರರು ಸ್ಫೋಟಿಸಿ 12 ಮಂದಿಯನ್ನು ಬಲಿತೆಗೆದುಕೊಂಡಿದ್ದರು. ಅದೇ ರೀತಿಯ ಬಾಂಬ್ ದಾಳಿಗಳಿಗೆ ಪಾಕ್ ಪ್ರಚೋದಿತ ಉಗ್ರರು ಯೋಜಿಸಿದ್ದಾರೆ ಎಂಬುದು ಗುಪ್ತಚರರಿಗೆ ಸಿಕ್ಕಿರುವ ಮಾಹಿತಿ. ಇದೀಗ ಬಂಧಿತರಾಗಿರುವ ಶಂಕಿತ ಉಗ್ರರು ದೆಹಲಿ ಹಾಗೂ ಕೋಲ್ಕತಾದಲ್ಲಿ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾಶ್ಮೀರ ಕುರಿತಾಗಿ ಪೋಸ್ಟರ್​ಗಳನ್ನು ಹಾಕುತ್ತಿದ್ದುದು ಬೆಳಕಿಗೆ ಬಂದಿದೆ. ಪೊಲೀಸರು ಇವರ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here