‘ಆಷಾಢ ಮಾಸದ ಆಚರಣೆಗಳು ಹಾಗೂ ಆಹಾರ ಪದ್ಧತಿಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ‘ಆಟಿಡೊಂಜಿ ಕೂಟ’ ಕಾರ್ಯಕ್ರಮದಿಂದ ಗ್ರಾಮೀಣ ಬದುಕಿನ ಭವ್ಯ ಸಂಸ್ಕೃತಿಯ ಅನಾವರಣ ಸಾಧ್ಯ ಎಂದು ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಹೇಳಿದರು.
ಅವರು ಆ.10ರಂದು ಸಂಘದ ಆಶ್ರಯದಲ್ಲಿ ಮಹಿಳಾ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪದಾಧಿಕಾರಿಗಳೊಂದಿಗೆ ಜ್ಯೋತಿ ಬೆಳಗಿಸಿ ಮಾತನಾಡಿದರು.
ಕೃಷಿ ಪ್ರಧಾನವಾಗಿರುವ ಗ್ರಾಮೀಣ ಪ್ರದೇಶದಲ್ಲಿ ಆಟಿ ತಿಂಗಳು ಎಂದರೆ ಜಡಿ ಮಳೆಯೊಂದಿಗೆ ಸಂಕಷ್ಟದ ದಿನಗಳು ಎಂಬ ಮಾತು ಪ್ರಚಲಿತದಲ್ಲಿದೆ. ಅಂದಿನ ಕಷ್ಟದ ದಿನಗಳಲ್ಲಿ ಗ್ರಾಮೀಣ ಜನತೆ ಸತ್ವಯುತ ಹಾಗೂ ಔಷಧೀಯ ಗುಣಗಳುಳ್ಳ ಸೊಪ್ಪು ತರಕಾರಿ, ಗೆಡ್ಡೆ ಗೆಣಸುಗಳನ್ನು ಯಾವ ರೀತಿಯಲ್ಲಿ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದರು ಎಂಬ ಸಂಪೂರ್ಣ ಚಿತ್ರಣ ಆಟಿ ತಿಂಗಳ ವೈವಿಧ್ಯಮಯ ಖಾದ್ಯಗಳನ್ನು ಸವಿದಾಗ ಅನುಭವಕ್ಕೆ ಬರುತ್ತದೆ. ಗ್ರಾಮೀಣ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅನುಕರಣೀಯ ಎಂದು ಅವರು ತಿಳಿಸಿದರು.
ಸಂಗೀತ ಕಲಾ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದ ಉದಯೋನ್ಮುಖ ಬಾಲ ಪ್ರತಿಭೆ ಶ್ರೀಯಾ ಎಸ್. ಪೂಜಾರಿ ಅಂಬಲಪಾಡಿ ಅವರನ್ನು ಸಂಘದ ಮತ್ತು ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಸಮಿತಿಯ ನಿಯೋಜಿತ ಅಧ್ಯಕ್ಷ ಶಿವದಾಸ್ ಪಿ., ಉಪಾಧ್ಯಕ್ಷ ಎ.ಮುದ್ದಣ್ಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಮಹಿಳಾ ಘಟಕದ ಸಂಚಾಲಕಿ ಗೋಧಾವರಿ ಎಮ್. ಸುವರ್ಣ, ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಕಾರ್ಯದರ್ಶಿ ವಾಣಿಶ್ರೀ ಅರುಣ್, ಜತೆ ಕಾರ್ಯದರ್ಶಿಗಳಾದ ಸಂಚಲ ಶಶಿಕಾಂತ್, ಅಶ್ವಿನಿ ಪೂಜಾರಿ ಹಾಗೂ ಅಮ್ಮ ಡ್ರೀಮ್ ಮೆಲೋಡಿಸ್ ತಂಡದ ಸುನಿಲ್ ಕುಮಾರ್, ಅಶ್ವಿನಿ ಸುನಿಲ್ ಸಹಿತ ಸಂಘದ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಘಟಕದ ಸಾಂಸ್ಕೃತಿಕ ಕಾರ್ಯದರ್ಶಿ ಲೋಲಾಕ್ಷಿ ಸಂಯೋಜನೆಯಲ್ಲಿ ಪುಟಾಣಿಗಳಿಂದ ಆಟಿ ಕಳಂಜ ನೃತ್ಯ ಪ್ರದರ್ಶನ ನಡೆಯಿತು.
ಸಂಘಟನಾ ಕಾರ್ಯದರ್ಶಿ ಪ್ರಭಾ ದಯಾನಂದ ಕಾರ್ಯಕ್ರಮ ನಿರೂಪಿಸಿ, ಸಹ ಸಂಚಾಲಕಿ ವಿಜಯ ಕೃಷ್ಣ ವಂದಿಸಿದರು.
ಆಟಿ ತಿಂಗಳ ವೈವಿಧ್ಯಮಯ ಖಾಧ್ಯಗಳೊಂದಿಗೆ ಸಾಮೂಹಿಕ ಭೋಜನ ನಡೆಯಿತು.