ಬೆಂಗಳೂರು, ಜುಲೈ 25: ಆಪ್ತ ಸ್ನೇಹಿತನನ್ನು ಬಿಟ್ಟು ಒಲ್ಲದ ಮನಸ್ಸಿನಲ್ಲಿ ಹೊರಟ ಸುರೇಶ್ ಸಾಕಾನೆ. ಪಂಜರದ ಒಳ ಹೋಗಲು ಹಠ ಮಾಡಿದ ಗೌರಿ. ಬೇಸರದಲ್ಲಿ ಸಾಕಾನೆಗಳನ್ನು ಕಳುಹಿಸಿಕೊಟ್ಟ ಮಾವುತರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ ಅಡಿಯಲ್ಲಿ ಸಾಕಾನೆಗಳಾದ ಸುರೇಶ್, ತುಳಸಿ, ಗೌರಿ ಮತ್ತು ಶ್ರುತಿ ಯನ್ನು ಗುರುವಾರ ಜಪಾನ್ಗೆ ರವಾನಿಸಲಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಸುರೇಶ್ ಸಾಕಾನೆ ತನ್ನ ಬಾಲ್ಯದ ಗೆಳೆಯ ಬಸವನನ್ನು ಬಿಟ್ಟು ಬರಲು ಒಪ್ಪಲಿಲ್ಲ. ಮಾವುತರು ಒತ್ತಾಯ ಮಾಡಿದರೂ ಕೆಲ ಕಾಲ ಸೇಹಿತ ಬಸವನನ್ನು ಅಪ್ಪಿಕೊಂಡ ಸುರೇಶ್, ಒಲ್ಲದ ಮನಸ್ಸಿನಿಂದ ಕೇಜ್ನತ್ತ ಹೆಜ್ಜೆ ಹಾಕಿದ್ದಾನೆ. ಗೌರಿ ಮತ್ತು ಶ್ರುತಿ ಸಹ ಹಠ ಮಾಡಿದ್ದು, ಕೊನೆಗೆ ತುಳಸಿ ಜೊತೆ ಸುರೇಶ್ ಸಾಕಾನೆಯನ್ನು ಹಿಂಬಾಲಿಸಿವೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್ಗೆ ಪ್ರಯಾಣ
2023 ರಿಂದಲೂ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯಕ್ಕೆ ಪ್ರಯತ್ನ ನಡೆಯುತ್ತಿದ್ದು, ಕೇಂದ್ರೀಯ ಮೃಗಾಲಯ ಪ್ರಾಧಿಕಾರ, ಜಪಾನ್ ಮತ್ತು ಭಾರತ ದೇಶದ ರಾಯಭಾರ ಕಚೇರಿಗಳು ಸೇರಿದಂತೆ ಪ್ರಮುಖ ಇಲಾಖೆಗಳ ಸಹಕಾರದಿಂದ ಇಂದು ಸಾಧ್ಯವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಲ್ಕು ಆನೆಗಳು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್ ದೇಶದ ಒಸಾಕಾ ಕಾನ್ಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾತಾರ್ ಏರ್ ವೇಸ್ B777-200F ಸರಕು ಸಾಗಣೆ ವಿಮಾನದಲ್ಲಿ ಕರೆದೊಯ್ಯಲಾಗಿದೆ.
8 ತಾಸು ವಿಮಾನ ಪ್ರಯಾಣಕ್ಕೆ ಆನೆಗಳಿಗೆ 3 ತಿಂಗಳುಗಳಿಂದ ತರಬೇತಿ
ಸುಮಾರು 8 ತಾಸು ವಿಮಾನ ಪ್ರಯಾಣ ಇರಲಿದ್ದು, ಈಗಾಗಲೇ ಕಳೆದ ಮೂರು ತಿಂಗಳಿಂದ ಆನೆಗಳಿಗೆ ತರಬೇತಿ ನೀಡಲಾಗಿತ್ತು. ಜಪಾನ್ ದೇಶದಿಂದ ಆಗಮಿಸಿದ್ದ ಮಾವುತರಿಗೆ ತರಬೇತಿ ಕೂಡ ನೀಡಲಾಗಿತ್ತು. ಜೊತೆಗೆ ಸಾಕಾನೆಗಳು ಅಲ್ಲಿನ ವಾತವರಣಕ್ಕೆ ಒಗ್ಗಿಕೊಳ್ಳುವ ಸಲುವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ವೈದ್ಯಾಧಿಕಾರಿಗಳು, ನಾಲ್ವರು ಮಾವುತರು, ಓರ್ವ ಮೇಲ್ವಿಚಾರಕ ಮತ್ತು ಜೀವಶಾಸ್ತ್ರಜ್ಞೆ 15 ದಿನಗಳ ಮಟ್ಟಿಗೆ ತೆರಳಲಿದ್ದು, ಮಾವುತರು ಭಾರದ ಮನಸ್ಸಿನಲ್ಲಿ ಸಾಕಾನೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಕಾನೆಗಳ ಬದಲಿಗೆ ಕೆಲವೇ ದಿನಗಳಲ್ಲಿ ಅಪರೂಪದ ಚೀತಾ, ಜಾಗ್ವಾರ್, ಪೂಮಾ ಸೇರಿದಂತೆ ಚಿಂಪಾಂಜಿ ಕ್ಯಾಪುಚಿನ್ ಕೋತಿಗಳ ಆಗಮನವಾಗುತ್ತಿದ್ದು, ಪ್ರಾಣಿ ಪ್ರಿಯರು ಅಪರೂಪದ ಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಕಾಲ ದೂರವಿಲ್ಲ.