ಬೆಳ್ತಂಗಡಿ : ತಾಲೂಕಿನ ಜಿತೇಶ್ ಎಂಬ ಯುವಕನು 10-02-2026ರ ರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಘಟನೆಯ ವೇಳೆ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಗಾಯಾಳುವಿನ ಸ್ಥಿತಿಯನ್ನು ಪರಿಶೀಲಿಸಿದರು.
ಶಾಸಕರು ಯಾವುದೇ ವಿಳಂಬವಿಲ್ಲದೆ ಜಿತೇಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಂಡರು. ಸಂಕಷ್ಟದ ಸಮಯದಲ್ಲಿ ತುರ್ತು ಸ್ಪಂದನೆ ತೋರಿದ ಶಾಸಕರ ನಡೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕೆಲವು ಆರೋಪಗಳು ಆಧಾರರಹಿತವೆಂದು ಕುಟುಂಬದವರು ತಿಳಿಸಿದ್ದಾರೆ. “ಪಬ್ಲಿಸಿಟಿ ಗಿಮಿಕ್” ಅಥವಾ “ಆಸ್ಪತ್ರೆಯಿಂದ ತೆರಳಿದರು” ಎಂಬ ಹೇಳಿಕೆಗಳು ನಿಜವಲ್ಲವೆಂದು ಸ್ಪಷ್ಟಪಡಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸಮಾಜಸೇವಕ ಕಿರಣ್ ಚಂದ್ರ ಪುಷ್ಪಗಿರಿ ಅವರು ಗಾಯಾಳುವಿನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ನಂತರ ಜಿತೇಶ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ, ಚಿಕಿತ್ಸೆ ನಡೆಯುವ ಅವಧಿಯಲ್ಲಿ ಅಗತ್ಯ ಆಸ್ಪತ್ರೆ ವ್ಯವಸ್ಥೆಗಳನ್ನು ಕೂಡ ನೋಡಿಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂಕಷ್ಟದ ಹೊತ್ತಿನಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿರುವ ಈ ನೆರವು ಕ್ರಮಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿವೆ. ಗಾಯಾಳುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

