ಸುಸ್ಥಿರ ಆರೋಗ್ಯಕ್ಕೆ ಸ್ವಚ್ಛ ಪರಿಸರ ಅತ್ಯಗತ್ಯ: ರಶ್ಮಿತಾ ಜೈನ್

0
84

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ: ಸಸ್ಯ ಶ್ಯಾಮಲಾ ವನಮಹೋತ್ಸವ

ಕಲ್ಲಬೆಟ್ಟು : ನೆಲ, ಜಲ, ಪ್ರಕೃತಿಯ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಉಸಿರಾಡುವುದಕ್ಕೆ ಹಸಿರು ಪ್ರಕೃತಿಯ ಅವಶ್ಯಕತೆ ಇದೆ.  ಸದೃಢ ಆರೋಗ್ಯಕ್ಕೆ ಸ್ವಚ್ಛ ಪರಿಸರ ಅತ್ಯಗತ್ಯ. ಇಂದು ನಾವು ನೆಡುವ ಗಿಡಗಳು ಮುಂದಿನ ಪೀಳಿಗೆಗೆ ವರದಾನವಾಗಬೇಕು. ಯುವ ಪೀಳಿಗೆ ಕ್ರಿಯಾಶೀಲವಾದಷ್ಟು ಹಿರಿಯರಿಂದ ಪ್ರೋತ್ಸಾಹ ದೊರಕುತ್ತದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.

ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ಮೂಡುಬಿದಿರೆ , ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್’, ಜವಾಹರಲಾಲ್ ನೆಹರು ಪ್ರೌಢಶಾಲೆ, ಶಿರ್ತಾಡಿ, ಜೀವ ನಿಧಿ ಸೇವಾ ಬಳಗ ಆರ್.ಸಿ.ಸಿ. ಹಾಗೂ  ರಾಷ್ಟ್ರ ಸೇವಿಕಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಸ್ಯ ಶ್ಯಾಮಲಾ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆಯತ್ತ ವಿದ್ಯಾರ್ಥಿಗಳ ಮನೋಭಾವ ಬೆಳೆಸುವ ನಿಟ್ಟಿನಲ್ಲಿ, ಸಾಮಾಜಿಕ ಜಾಗೃತಿ ಮೂಡಿಸುವ ನೆಲೆಯಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆ “ಸಸ್ಯ ಶ್ಯಾಮಲಾ” ಎಂಬ ಶೀರ್ಷಿಕೆಯಡಿ ಮೂಡುಬಿದಿರೆ ಸುತ್ತಮುತ್ತ ಪರಿಸರದಲ್ಲಿ 1000 ಗಿಡಗಳನ್ನು  ನೆಟ್ಟು ಸಂರಕ್ಷಿಸುವ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ. ಸಾಮಾಜಿಕ ಜಾಗೃತಿಯ ಘೋಷ ವಾಕ್ಯಗಳು ನಮ್ಮ ಮನಸ್ಸಿನಲ್ಲಿ ಉತ್ಸಾಹವನ್ನು ತುಂಬಿ ದೈನಂದಿನ ಬದುಕಿನಲ್ಲಿ ಹೃದಯಪೂರ್ವಕವಾಗಿ ಆಚರಣೆಗೆ ತಂದಾಗ ಅರ್ಥಪೂರ್ಣ ಕಾರ್ಯಕ್ರಮ ವಾಗುತ್ತದೆ. ಮತ್ತು ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಾಮಾಜಿಕ ಕರ್ತವ್ಯಗಳ ಬಗ್ಗೆ ಯೋಚಿಸುತ್ತ  ಕಾರ್ಯ ಪ್ರವೃತ್ತರಾದಾಗ ಸ್ವಚ್ಛ ಪರಿಸರ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‌ನ ಅಧ್ಯಕ್ಷ ರೊ. ಹರೀಶ್ ಎಂ.ಕೆ. ಅವರು ಮಾತನಾಡುತ್ತ, ಎಕ್ಸಲೆಂಟ್ ಸಂಸ್ಥೆಯು ಸಸ್ಯ ಶಾಮಲಾ ಯೋಜನೆಯ ಮೂಲಕ ಜನ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಈ ರೀತಿಯ ಸಾಮಾಜಿಕ ಚಟುವಟಿಕೆಗಳಿಗೆ ರೋಟರಿ ಸಂಸ್ಥೆ ಸದಾ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸುತ್ತ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಯ ಆವರಣದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆಯ ಹೊಣೆಗಾರಿಕೆಗೆ ವಿದ್ಯಾರ್ಥಿಗಳ ತಂಡವನ್ನು ರಚಿಸಿದರು.

ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಆಗ್ನೆಸ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಜನಾರ್ದನ ಸೇರಿಗಾರ್, ಜೀವ ನಿಧಿ ಸೇವಾ ಬಳಗ ಆರ್.ಸಿ. ಸಿ.ಯ ಅಧ್ಯಕ್ಷ ಶಶಿಧರ್ ದೇವಾಡಿಗ ಗೆಂದೊಟ್ಟು, ರಾಷ್ಟ್ರ ಸೇವಿಕಾ ಸಮಿತಿಯ ಅಧ್ಯಕ್ಷೆ ಮೂಕಾಂಬಿಕಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಸ್ವಾಗತಿಸಿ. ಎಕ್ಸಲೆಂಟ್ ಸಂಸ್ಥೆಯ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವೀ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಶಿಕ್ಷಕಿ ಸುಮಂಗಲಾ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಮಾಲತಿ ವಂದಿಸಿದರು. ಕಾರ್ಯಕ್ರಮದ ನಂತರ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಮತ್ತು ಶಿರ್ತಾಡಿ ಜವಾಹರಲಾಲ್ ನೆಹರೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಕ್ಸಲೆಂಟ್ ಸಂಸ್ಥೆ ಒದಗಿಸಿದ ವಿವಿಧ ತಳಿಯ ಗಿಡಗಳನ್ನು ಶಾಲೆಯ ನೆಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here