ಬೆಂಗಳೂರು: ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ರನ್ಯಾ ರಾವ್ಗೆ ಸೇರಿದ ಬೆಂಗಳೂರಿನ ಅರ್ಕಾವತಿ ಬಡವಾಣೆಯಲ್ಲಿನ ನಿವೇಶ, ವಿಕ್ಟೋರಿಯಾ ಲೇಔಟ್ನಲ್ಲಿನ ಮನೆ, ಅನೇಕಲ್ನಲ್ಲಿನ ಕೃಷಿ ಜಮೀನು ಮತ್ತು ತುಮಕೂರಿನಲ್ಲಿನ ಜಮೀನನ್ನು ಇಡಿ ಜಪ್ತಿ ಮಾಡಿದೆ. ಚಿನ್ನ ಕಳ್ಳಸಾಗಾಣಿಕೆ ಸಂಬಂಧಿಸಿದಂತೆ ದಾಖಲಾಗಿರುವ ಸಿಬಿಐ ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಒಪ್ಪಿಗೆ ಮೇರೆಗೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡಿದೆ.
ರಾನ್ಯ ರಾವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ನಲ್ಲಿ ದುಬೈನಿಂದ ಹಿಂದಿರುಗುವಾಗ ಬಂಧಿಸಲಾಗಿತ್ತು. ಕಸ್ಟಮ್ ಅಧಿಕಾರಿಗಳು ಇವರನ್ನು ತಪಾಸಣೆಗೆ ಒಳಪಡಿಸಿದಾಗ 12.56 ಕೋಟಿ ರೂ. ಮೌಲ್ಯದ 14.213 ಕೆಜಿ ಚಿನ್ನ ಪತ್ತೆಯಾಗಿತ್ತು. ಬಳಿಕ ರನ್ಯಾ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ 2.67 ಕೋಟಿ ಮೌಲ್ಯದ ದಾಖಲೆಗಳಿಲ್ಲದ ಹಣ ಮತ್ತು 2.06 ಕೋಟಿ ಮೌಲ್ಯದ ಚಿನ್ನದ ಆಭರಣಗಳು ಪತ್ತೆಯಾದ್ದವು.
ಇಡಿ ತನಿಖೆ ವೇಳೆ ಬಯಲಾದ ಅಂಶಗಳು
ರನ್ಯಾ ರಾವ್, ತರುಣ್ ಕೊಂಡೂರು ಮತ್ತು ಇತರರು ಸಕ್ರಿಯವಾಗಿ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದರು. ದುಬೈ ಮತ್ತು ಉಗಾಂಡಾದ ಪೂರೈಕೆದಾರರಿಂದ ಚಿನ್ನವನ್ನು ಖರೀದಿಸಿ, ಹವಾಲಾ ಮೂಲಕ ನಗದು ಪಾವತಿ ಮಾಡುತ್ತಿದ್ದರು. ದುಬೈನಲ್ಲಿ ಚಿನ್ನ ಸಾಗಾಣೆ ಬಗ್ಗೆ ಸುಳ್ಳು ಕಸ್ಟಮ್ಸ್ ಡಿಕ್ಲರೇಷನ್ ಪಡೆಯುತ್ತಿದ್ದರು. ಚಿನ್ನವನ್ನು ಸ್ವಿಟ್ಜರ್ಲ್ಯಾಂಡ್, ಯುಎಸ್ಎಗೆ ತೆಗೆದುಕೊಂಡು ಹೋಗುತ್ತೇವೆಂದು ಡಿಕ್ಲರೇಷನ್ ಪಡೆಯುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.