ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 4ನೇ ಬಾರಿಗೆ ಫೇಲ್ ಆದ ಪರಿಣಾಮ, 17 ವರ್ಷದ ಬಾಲೆಯು ಆತ್ಮಹತ್ಯೆಗೆ ಶರಣಾಗಿರುವ ದುಃಖದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಾಚೋಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ತನುಶ್ರೀ (17) ಎಂದು ಗುರುತಿಸಲಾಗಿದ್ದು, ಆಕೆ ರವಿ ಮತ್ತು ಶ್ವೇತಾ ದಂಪತಿಗಳ ಪುತ್ರಿ ಆಗಿದ್ದಾಳೆ. ತನುಶ್ರೀ ಬೆಂಗಳೂರು ಮಾಗಡಿ ರಸ್ತೆಯ ಬ್ಯಾಡರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಈ ಬಾರಿಯ ಸಪ್ಲಿಮೆಂಟ್ರಿ ಪರೀಕ್ಷೆಯಲ್ಲಿ 3 ವಿಷಯಗಳಿಗೆ ಪರೀಕ್ಷೆ ಬರೆದಿದ್ದಳು. ಆದರೆ, ಸಪ್ಲಿಮೆಂಟ್ರಿ ಫಲಿತಾಂಶವು ನಿನ್ನೆ (ಜು.24) ಬಿಡುಗಡೆಯಾದಾಗ, ಮತ್ತೆ ಫೇಲ್ ಆಗಿದ್ದ ವಿಚಾರವನ್ನು ತಾನು ಮೊಬೈಲ್‌ನಲ್ಲಿ ನೋಡಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೋಷಕರು ಮನೆಯಲ್ಲಿಲ್ಲದ ವೇಳೆ, ತಾನು ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭ ಅಡುಗೆ ಮನೆಯಲ್ಲಿದ್ದ ಪ್ಯಾನಿಗೆ ನೇಣು ಬಿಗಿದುಕೊಂಡು ತನ್ನ ಜೀವವನ್ನು ತೆಗದುಕೊಂಡಿದ್ದಾಳೆ. ಈ ಆಘಾತಕಾರಿ ಘಟನೆ ಬೆಳಕಿಗೆ ಬಂದ ತಕ್ಷಣವೇ ಕುಟುಂಬಸ್ಥರು ಆಕೆಯನ್ನು ನೇಣು ಹಗ್ಗದಿಂದ ಕೆಳಗಿಳಿಸಿ ಪರೀಕ್ಷೆ ಮಾಡಿದ್ದಾರೆ. ಈ ವೇಳೆಗಾಗಲೇ ಪ್ರಾಣ ಹೋಗಿತ್ತು. ನಂತರ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಶವವನ್ನು ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮಗಳ ಸಾವಿನ ಸುದ್ದಿ ಕೇಳಿದ ತಕ್ಷಣ ಶವಾಗಾರದ ಮುಂದೆ ತನುಶ್ರೀಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೋಷಕರು ಮತ್ತು ಬಂಧುಗಳು ಆಘಾತದಲ್ಲಿದ್ದಾರೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.