ಕಲ್ಲಡ್ಕ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ರಮೇಶ್ ನಾಯಕ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಟೈಲರ್ ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಅವರು ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು. ಶ್ರೀ ರಮೇಶ್ ನಾಯಕ್ ಅವರು ಶಾಲೆಗೆ ನೀಡಿದ ಕೊಡುಗೆಗಳು ಅವಿಸ್ಮರಣೀಯ, ಎಂದರು
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಶ್ರೀ ರಮೇಶ್ ನಾಯಕ್ ಅವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆನೀಡಿದ ಅಪ್ರತಿಮ ಕೊಡುಗೆಗಳನ್ನು ಸ್ಮರಿಸಿ ಅವರ ನಿಸ್ವಾರ್ಥ ಸೇವೆ, ಶಿಸ್ತು ಮತ್ತು ವಿದ್ಯಾರ್ಥಿಗಳ ಮೇಲಿದ್ದ ಕಾಳಜಿಯನ್ನು ಎಲ್ಲರೂ ಶ್ಲಾಘಿಸಿದರು.
ಅಭಿನಂದನೆಯ ಗೌರವವನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಶ್ರೀ ರಮೇಶ್ ನಾಯಕ್ ತಮ್ಮ ಸೇವಾವಧಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಇಲ್ಲಿನ ಜನರ ಸಹಕಾರ, ಶಿಕ್ಷಕರ ತಂಡ ಮತ್ತು ವಿದ್ಯಾರ್ಥಿಗಳ ಪ್ರೀತಿಯನ್ನು ನೆನೆದು ಭಾವುಕರಾದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ನಾಗೇಶ್ ಪೂಜಾರಿ, ಬಾಲಕೃಷ್ಣ ಕೊಟ್ಟಾರಿ, ಕೃಷ್ಣಪ್ಪ ಪೂಜಾರಿ, ರಮೇಶ್ ನಾಯಕ ರವರ ಪತ್ನಿ ಶ್ರೀಮತಿ ಜ್ಯೋತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ
ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಸುಜಾತಾ ಸ್ವಾಗತಿಸಿ ವಿಜ್ಞಾನ ಶಿಕ್ಷಕರ ಚಿದಾನಂದ ವಂದಿಸಿ, ಹಿಂದಿ ಶಿಕ್ಷಕ ಶಂಕರ್ ವೆಂಕಪ್ಪ ಪಾವಸ್ಕರ್ ಕಾರ್ಯಕ್ರಮ ನಿರೂಪಿಸಿದರು.