ಮಂಗಳೂರು ಪಾಲಿಕೆಯ ‘ಭೂ’ ದಾಹಕ್ಕೆ ಬಲಿಯಾದ ರೈತರು

0
22

ಪರಿಹಾರದ ಹೆಸರಲ್ಲಿ ತಾರತಮ್ಯ ಮತ್ತು ವೈಫಲ್ಯ ,

ಕಡತಗಳ ಧೂಳಲ್ಲಿ ಹೂತ ಹಕ್ಕುಗಳು !

​ “ನಮ್ಮ ಮಣ್ಣು ಅವರಿಗೆ ಬಂಗಾರ, ನಮಗೆ ಮಾತ್ರ ಬಿಡಿಗಾಸಿನ ಭಿಕ್ಷೆಯೇ?” ಸಂತ್ರಸ್ತರ ಆಕ್ರೋಶ

ವರದಿ : ನರಸಿಂಹ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ಕಳೆದ ಎರಡು ದಶಕಗಳಿಂದ ತ್ಯಾಜ್ಯ ನಿರ್ವಹಣೆಗಾಗಿ ಹಲವಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವೈಜ್ಞಾನಿಕ ದರ ನಿಗದಿ ಮತ್ತು ಅಧಿಕಾರಿಗಳ ಉದಾಸೀನತೆ ಇಂದು ಭೂಮಿ ನೀಡಿದ ರೈತ ಕುಟುಂಬಗಳನ್ನು ಬೀದಿಗೆ ತಂದಿದೆ. ಮಣ್ಣನ್ನೇ ನಂಬಿ ಬದುಕುತ್ತಿದ್ದ ಕೃಷಿಕರು ಇಂದು ನ್ಯಾಯಕ್ಕಾಗಿ ಕಚೇರಿಗಳಿಂದ ನ್ಯಾಯಾಲಯಕ್ಕೆ ಅಲೆಯುವಂತಾಗಿದೆ.

ದರ ನಿಗದಿಯಲ್ಲಿ ಘೋರ ತಾರತಮ್ಯ ಅಧಿಕಾರಿಗಳದ್ದೇ ಆಟ?


ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾಲಿಕೆಯು ಅನುಸರಿಸಿದ ಮಾನದಂಡಗಳು ಅತಾರ್ಕಿಕವಾಗಿವೆ.

​ ಅವೈಜ್ಞಾನಿಕ ದರ

2003ರಲ್ಲಿ ನಿಗದಿಯಾದ ದರಕ್ಕಿಂತ 2005ರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಅರ್ಧದಷ್ಟು ಬೆಲೆ ನೀಡಲಾಗಿದೆ.

​ ಅಧಿಕಾರ ದುರುಪಯೋಗ

ದರ ನಿರ್ಧರಿಸುವ ಅಧಿಕಾರ ಬೇರೆ ಇಲಾಖೆಗಿದ್ದರೂ, ಪಾಲಿಕೆಯ ಭೂಸ್ವಾಧೀನ ಅಧಿಕಾರಿಯೇ ನಿಯಮಬಾಹಿರವಾಗಿ ಬೆಲೆ ನಿಗದಿಪಡಿಸಿರುವುದು ದೊಡ್ಡ ಜಿಜ್ಞಾಸೆಗೆ ಕಾರಣವಾಗಿದೆ.

​ ಇತ್ತೀಚಿನ ವಿರೋಧಾಭಾಸ

2019ರಲ್ಲಿ ಹೆಚ್ಚಿನ ದರ ನೀಡಿದ ಪಾಲಿಕೆ, 2020ರ ತ್ಯಾಜ್ಯ ದುರಂತದ ನಂತರ ಸ್ವಾಧೀನಪಡಿಸಿಕೊಂಡ ಭೂಮಿಗೆ ಅತ್ಯಲ್ಪ ಮೊತ್ತ ನೀಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.

​ಪಚನಾಡಿ ದುರಂತ

ಆರು ವರ್ಷವಾದರೂ ಮುಗಿಯದ ಕಣ್ಣೀರು

ಪಚನಾಡಿ ತ್ಯಾಜ್ಯ ದುರಂತದಲ್ಲಿ ಸರ್ವಸ್ವವನ್ನೂ ಕಳೆದುಕೊಂಡ ರೈತರು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ ಪಡೆದು ಮಧ್ಯಂತರ ಪರಿಹಾರವನ್ನು ಪಡೆದುಕೊಂಡು ಇನ್ನುಳಿದ ಪರಿಹಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿ ಆರು ವರ್ಷಗಳೇ ಕಳೆದಿವೆ. ಕೃಷಿ ಭೂಮಿ ಇಂದು ಕಸದ ರಾಶಿಯಡಿ ಹೂತುಹೋಗಿದೆ, ಆದರೆ ಪೂರ್ಣ ಪ್ರಮಾಣದ ಪರಿಹಾರ ಮಾತ್ರ ಇನ್ನೂ ರೈತರ ಕೈಸೇರಿಲ್ಲ.

ಕುಡುಪು ಗ್ರಾಮದ ಅಕ್ಕಪಕ್ಕದ ಭೂಮಾಲೀಕರ ಅಹವಾಲುಗಳನ್ನು ಅಧಿಕಾರಿಗಳು ಕಿಂಚಿತ್ತೂ ಗಮನಿಸದೆ ತಿರಸ್ಕರಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಡತಗಳ ಗುಡ್ಡೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ

ಪಾಲಿಕೆಯ ಮೂರನೇ ಮಹಡಿಯಲ್ಲಿರುವ ಭೂಸ್ವಾಧೀನ ಕಚೇರಿ ಇಂದು ಧೂಳು ಹಿಡಿದ ಕಡತಗಳಿಂದ ತುಂಬಿ ತುಳುಕುತ್ತಿದೆ. ಅಲ್ಲಿ ಯಾವುದೇ ಕ್ರಮಬದ್ಧತೆ ಇಲ್ಲ .

ಈ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳು ನಿವೃತ್ತರಾಗಿದ್ದಾರೆ ಅಥವಾ ವರ್ಗಾವಣೆಗೊಂಡಿದ್ದಾರೆ. ಆದರೆ ಈಗಿರುವ ಅಧಿಕಾರಿಗಳು ಹಳೆಯ ಕಡತಗಳನ್ನು ವಿಲೇವಾರಿ ಮಾಡುವ ಬದಲು, ರೈತರ ನೋವಿಗೆ ಸ್ಪಂದಿಸದೆ ಉದಾಸೀನತೆ ತೋರುತ್ತಿದ್ದಾರೆ ಎಂಬುದು ಸಂತ್ರಸ್ತರ ದೂರು.

ಬೊಕ್ಕಸಕ್ಕೆ ಹೊರೆಯಾಗಲಿವೆಯೇ ಎಂಬ ಕುತೂಹಲ

​ಇದು ಕೇವಲ ರೈತರ ಸಮಸ್ಯೆಯಲ್ಲ, ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆಯೂ ಹೌದು. ನ್ಯಾಯಾಲಯದಲ್ಲಿ ರೈತರ ಪರ ತೀರ್ಪು ಬಂದರೆ, ಮೂಲ ಅಸಲು ಮೊತ್ತದ ಜೊತೆಗೆ ನ್ಯಾಯಾಲಯ ವಿಧಿಸುವ ಭಾರಿ ದಂಡ ತೆರಬೇಕಾಗುತ್ತದೆ. ವಾರ್ಷಿಕ ಬಡ್ಡಿ + ದಂಡ ನೀಡಬೇಕಾದ ಅನಿವಾರ್ಯತೆ ಬರಲಿದೆ.

ಜನರ ತೆರಿಗೆ ಹಣವು ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುವ ಬದಲು, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ದಂಡ ಪಾವತಿಸಲು ಬಳಕೆಯಾಗುವುದು ವಿಪರ್ಯಾಸ.

​ ವ್ಯವಸ್ಥೆಯ ವಿವೇಚನೆಗೆ ಮನವಿ

​ಈ ಸುದೀರ್ಘ ವಿಳಂಬ ಮತ್ತು ತಾರತಮ್ಯವು ಆಡಳಿತ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನು ಸಡಿಲಗೊಳಿಸುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನು ಪಡೆದ ನಂತರ, ಅದರ ಅರ್ಹ ಪರಿಹಾರಕ್ಕಾಗಿ ರೈತರನ್ನು ದಶಕಗಳ ಕಾಲ ಕಾಯಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು. ಸರ್ಕಾರ ಮತ್ತು ನ್ಯಾಯಾಂಗವು ಈ ಕೂಡಲೇ ಮಧ್ಯಪ್ರವೇಶಿಸಿ, ದಾರಿತಪ್ಪಿದ ಪ್ರಕ್ರಿಯೆಗಳನ್ನು ಸರಿಪಡಿಸಿ, ತಪ್ಪು ಎಸಗಿದವರ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಮತ್ತು ಶಿಕ್ಷಿಸಬೇಕು.

ರೈತರಿಗೆ ಗೌರವಯುತ ಪರಿಹಾರ ನೀಡಿ, ಅವರು ಮತ್ತೆ ಬದುಕು ಕಟ್ಟಿಕೊಳ್ಳುವಂತೆ ಮಾಡುವುದು ನಾಗರಿಕ ಸಮಾಜದ ನೈತಿಕ ಜವಾಬ್ದಾರಿಯಾಗಿದೆ.

ಸಂತ್ರಸ್ತರ ಆಶಯ ಒಂದೇ: “ನಾವು ಭೂಮಿ ನೀಡಿದ್ದು ನಗರದ ಹಿತಕ್ಕಾಗಿ, ಆದರೆ ನಮ್ಮ ಹಿತವನ್ನು ರಕ್ಷಿಸಬೇಕಾದವರು ನಮ್ಮನ್ನೇ ಮರೆತಿದ್ದಾರೆ. ನ್ಯಾಯಾಲಯವೊಂದೇ ಈಗ ನಮಗೆ ದಾರಿದೀಪ.”

LEAVE A REPLY

Please enter your comment!
Please enter your name here