ರೈತ ಸ್ವಾಭಿಮಾನಿ ಜಾಥಾ, ಪೋಸ್ಟ್ ಕಾರ್ಡ್ ಚಳವಳಿ

0
12


ವರದಿ ರಾಯಿ ರಾಜ ಕುಮಾರ
ಸಾವಿರಾರು ವರ್ಷಗಳಿಂದ ಭೂಮಿಯನ್ನು ತಾಯಿಯ ಸಮಾನವೆಂದು ಪರಿಗಣಿಸಿ ಕೃಷಿ ಮಾಡಿ ಉತ್ತು ಬಿತ್ತು ಬೆಳೆಸಿದ ಬೆಳೆಯನ್ನು ಏಕಾಏಕಿ ಪೂರ್ವ ಸೂಚನೆ ನೀಡದೆಯೇ ಬಲಾತ್ಕಾರವಾಗಿ ಪೊಲೀಸ್ ಬಲವನ್ನು ಉಪಯೋಗಿಸಿ ಭೂಮಾಲಕರ ಅಡಿಕೆ ಹಾಗೂ ತೆಂಗಿನ ತೋಟಗಳು, ಭತ್ತದ ಕೃಷಿ ಭೂಮಿಗೆ ಕಾನೂನು ಬಾಹಿರವಾಗಿ ಜೆಸಿಬಿ ಯಂತ್ರದ ಮೂಲಕ ನುಗ್ಗಿ ನಾಶಪಡಿಸಿ ದೌರ್ಜನ್ಯವನ್ನು ಎಸಗಿರುವ ಯುಕೆ ಟಿಎಲ್ 400 ಕೆ ವಿ ವಿದ್ಯುತ್ ಪ್ರಸರಣ ಕಂಪನಿಯ ವಿರುದ್ಧ ತೆಂಕ ಮಿಜಾರು, ಬಡಗಮಿಜಾರು ಗ್ರಾಮಸ್ಥರು ಅಶ್ವತ್ಥಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಾಗೂ ಪೋಸ್ಟ್ ಕಾರ್ಡ್ ಚಳವಳಿಯನ್ನು ಹಮ್ಮಿಕೊಂಡಿದ್ದರು.. ಯಾವುದೇ ಪರಿಹಾರ ನೀಡದೆ ತೆಂಕ ಮಿಜಾರು ಗ್ರಾಮದ ಭಾಸ್ಕರ ಶೆಟ್ಟಿ ಹಾಗೂ ಬಡಗಮಿಜಾರು ಗ್ರಾಮದ ಸಂಜೀವ ಗೌಡರಿಗೆ ಸೇರಿದ ಭೂಮಿಯ ಒಳಗೆ ಅಕ್ರಮ ಪ್ರವೇಶಿಸಿ ಜೆಸಿಬಿ ಯಂತ್ರವನ್ನು ನುಗ್ಗಿಸಿ ಕೃಷಿ ಭೂಮಿ, ಬೆಳೆದ ತೆಂಗು ಕಂಗು ಇತ್ಯಾದಿಗಳ ಫಸಲನ್ನು ಸಂಪೂರ್ಣ ನಾಶಪಡಿಸಿ ದೌರ್ಜನ್ಯವನ್ನು ಎಸಗಿರುತ್ತಾರೆ.
ಪ್ರಕೃತಿಯ ಮೇಲಿನ ಈ ಅತ್ಯಾಚಾರವನ್ನು, ಕೃಷಿ ಭೂಮಿ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಈ ಹಿಂದೆ ನಡೆಸಿದ್ದ ಚಳುವಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೇ ಆದೇಶ ನೀಡಿದ್ದರು ಕೂಡ ಅದನ್ನು ಪಾಲಿಸದೆಯೇ ಯುಕೆ ಟಿಎಲ್ 400 ಕೆ ವಿ ವಿದ್ಯುತ್ ಪ್ರಸರಣ ಕಂಪನಿಯು ರೈತರ ಭೂಮಿಯನ್ನು ನಾಶ ಮಾಡಿರುತ್ತದೆ.


ರೈತರ ಭೂಮಿಯನ್ನು ಉಳಿಸುವುದಕೋಸ್ಕರವಾಗಿ ಮತ್ತು ಇಡೀ ದೇಶದಲ್ಲಿ ಏಕರೂಪದ ಭೂಸ್ವಾಧೀನ ಪ್ರಕ್ರಿಯೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಹಾಗೂ ವಿದ್ಯುತ್ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತನಿಗೆ ಬದಲಿ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಬಡಗಮಿಜಾರು ಗ್ರಾಮ, ತೆಂಕ ಮಿಜಾರು ಗ್ರಾಮದ ರೈತರು “ನಮ್ಮ ಭೂಮಿ ನಮ್ಮ ಹಕ್ಕು” ಎಂಬ ಘೋಷವಾಕ್ಯದೊಂದಿಗೆ ರೈತ ಸ್ವಾಭಿಮಾನಿ ಜಾಥಾವನ್ನು ನವೆಂಬರ್ ಒಂದರಂದು ಹಮ್ಮಿಕೊಂಡಿದ್ದರು.
ತತ್ಸಂಬಂಧಿ ಚಳವಳಿಗೆ ಬಲ ನೀಡುವ ಉದ್ದೇಶದಿಂದ ಗ್ರಾಮಸ್ಥರೆಲ್ಲರ ಕಾರ್ಡ್ ಚಳವಳಿಯನ್ನು ಕೂಡ ಹಮ್ಮಿಕೊಂಡಿದ್ದು ಗಣ್ಯರು ಅಶ್ವತ್ಥಪುರದ ಅಂಚೆ ಕಚೇರಿಯಲ್ಲಿ ಕಾರ್ಡುಗಳನ್ನು ಪೋಸ್ಟ್ ಡಬ್ಬಿಗೆ ಹಾಕುವ ಮೂಲಕ ಬೆಂಬಲವನ್ನು ಸೂಚಿಸಿದರು.
ಮೂಡುಬಿದಿರೆ ಕಿಸಾನ್ ಸಂಘದ ಬೆಂಬಲದೊಂದಿಗೆ ಒಟ್ಟು ಸೇರಿದ ರೈತರು ಸ್ವಾಭಿಮಾನಿ ಜಾಥಾಕ್ಕೆ ಸ್ವತಹ ಭಾಗವಹಿಸುವ ಮೂಲಕವಾಗಿ ಕಟೀಲು ದೇವಾಲಯದ ಅನಂತಪದ್ಮನಾಭ ಅಸ್ರಣ್ಣ, ಕೇಮಾರು ಈಶ ವಿಠಲ ದಾಸ ಸ್ವಾಮೀಜಿ, ಕೆಎಂಎಫ್ ನ ಕಡಂದಲೆ ಸುಚರಿತಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ರಾಜ್ಯ ರೈತ ಘಟಕದ ನಾರಾಯಣಸ್ವಾಮಿ ಅಶ್ವತ್ಥಪುರ ದೇವಾಲಯದ ಕೃಷ್ಣಮೂರ್ತಿ, ಮೂಡುಬಿದಿರೆ ತಾಲೂಕು ಪ್ರಮುಖ ವಸಂತ ಭಟ್, ಶಾಂತಿಪ್ರಸಾದ್ ಹೆಗ್ಡೆ, ಹೊನ್ನಪ್ಪ ಗೌಡ, ಚಂದ್ರಹಾಸ ಶೆಟ್ಟಿ ಇನ್ನ, ಪ್ರವೀಣ ಭಂಡಾರಿ ಮೂಡುಬಿದಿರೆ, ರವಿರಾಜ, ಹಾಗೂ ಇತರರು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದರು.
.

LEAVE A REPLY

Please enter your comment!
Please enter your name here