ಕಾಸರಗೋಡು : ಡಾ. ವಾವನ್ ರಾವ್ ಬೇಕಲ್–ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಸ್ಥಾಪಿತವಾದ “ಸೀತಮ್ಮ ಪುರುಷ ನಾಯಕ ಸ್ಮಾರಕ” ಕನ್ನಡ ಭವನ ಗ್ರಂಥಾಲಯ (ರಿ.223/2008) ಇದರ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ–2026 ಅನ್ನು ಫೆಬ್ರವರಿ 22, 2026 ಭಾನುವಾರ ಕಾಸರಗೋಡು ಜಿಲ್ಲೆಯ ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ಆಯೋಜಿಸಲಾಗುತ್ತಿದೆ.
“ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್” ವೇದಿಕೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಕವಿಗೋಷ್ಠಿ, ಯುವಕವಿಗೋಷ್ಠಿ, ವಿಚಾರಗೋಷ್ಠಿ ಸೇರಿದಂತೆ ಹಲವು ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ “ಕವಿ ಕಾವ್ಯವಿಭೂಷಣ” ಹಾಗೂ “ಕವಿ ಕಾವ್ಯ ಕಂಠೀರವ” ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಾಂಸ್ಕೃತಿಕ ಕಲಾ ವೈಭವ, ಯಕ್ಷಗಾನ ಬಯಲಾಟ, 101 ಮಂದಿಯಿಂದ ಪ್ರಾತಃಕಾಲ ಭಜನೆ ಸೇರಿದಂತೆ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಲೋಚನೆ ನಡೆಸಲಾಗುತ್ತಿದೆ.
ಕನ್ನಡ ಭವನದ ಸ್ಥಾಪಕರೂ, ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರೂ ಆದ ಡಾ. ವಾಮನ್ ರಾವ್ ಬೇಕಲ್ ಅವರು ಈ ವಿಷಯವನ್ನು ತಿಳಿಸಿದ್ದು, ಪ್ರಶಸ್ತಿಗೆ ಅರ್ಹತೆಯಿರುವ ಸ್ವರಚಿತ ಚುಟುಕು ಕವಿಗಳು ಹೆಚ್ಚಿನ ಮಾಹಿತಿಗಾಗಿ 9037173400 ಮೊಬೈಲ್ ಸಂಖ್ಯೆಯನ್ನು ವಾಟ್ಸಪ್ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

