ಮಂಗಳೂರು: ಮೀನುಗಾರಿಕೆ ಇಲ್ಲ ಅಂದ್ರೆ ಎಷ್ಟೋ ಜನರ ಜೀವನವೇ ಇಲ್ಲ ಎಂದರ್ಥ. ಆದ್ರೆ ಕಳೆದ ನಾಲ್ಕೈದು ವರ್ಷಗಳಿಂದ ಸಮುದ್ರದಲ್ಲಿ ಮತ್ಸ್ಯಕ್ಷಾಮ ಕಂಡು ಬರುತ್ತಿದೆ. ಮೀನುಗಾರಿಕೆಗೆ ಹೋಗುವ ಮೀನುಗಾರರು ನಿರೀಕ್ಷಿಸಿದಷ್ಟು ಮೀನುಗಳು ಲಭ್ಯವಾಗದೆ ದಡ ಸೇರುತ್ತಿದ್ದಾರೆ. ಜೊತೆಗೆ ಅವಧಿಗೆ ಮುನ್ನವೇ ಬೋಟ್‍ಗಳು ಕಡಲ ಕಿನಾರೆಯಲ್ಲಿ ಲಂಗರು ಹಾಕುತ್ತಿದೆ. ಇದಕ್ಕೊಂದು ಪರಿಹಾರೋಪಾಯವನ್ನು ಮೀನುಗಾರರೇ ಹುಡುಕಿ ಅದನ್ನು ಕಾಯ್ದೆ ರೂಪದಲ್ಲಿ ಜಾರಿಗೊಳಿಸುವಂತೆ ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ.
ಮೂರು ತಿಂಗಳ ಕಾಲ ಬೇಕು
ಹೌದು ಮತ್ಸ್ಯಕ್ಷಾಮ ಮೀನುಗಾರರನ್ನು ಕಂಗೆಡುವಂತೆ ಮಾಡಿದೆ. ಬೋಟ್ ಮಾಲೀಕರು ನಿರೀಕ್ಷಿದಷ್ಟು ಮತ್ಸ್ಯ ಸಂಪತ್ತು ದೊರಕದೆ ಕೈಸುಟ್ಟು ಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ಸ್ಯ ಸಂತತಿ ನಾಶವೇ ಮುಖ್ಯ ಕಾರಣ. ಮಳೆಗಾಲದಲ್ಲಿ ಮೀನುಗಳ ಸಂತಾನೋತ್ಪತ್ತಿಯ ಕಾಲ. ಈ ಅವಧಿಯಲ್ಲಿ ಮೀನುಗಳ ಮೊಟ್ಟೆಯಿಂದ ಹೊರಬರುವ ಮರಿಗಳು ಮೂರು ತಿಂಗಳ ಕಾಲ ಸಮರ್ಪಕ ರೀತಿಯಲ್ಲಿ ಬೆಳೆದು ದೊಡ್ಡದಾದಲ್ಲಿ ಮೀನುಗಾರರಿಗೇ ಉಪಯುಕ್ತ.
ಮೀನುಗಾರಿಕೆ ನಿಷೇಧ ಕಾಲಾವಧಿ ಏರಿಕೆ ಮಾಡಿ
ಸದ್ಯ ಎರಡು ತಿಂಗಳ ಕಾಲ ಮಾತ್ರವಿರುವ ಮೀನುಗಾರಿಕೆ ನಿಷೇಧ ಮತ್ಸ್ಯ ಸಂತತಿ ಬೆಳವಣಿಗೆಗೆ ತೊಡಕಾಗುತ್ತಿದೆ. ಮೀನುಗಾರಿಕೆ ನಿಷೇಧ ಕಾಲಾವಧಿ ಏರಿಕೆಯಾದಲ್ಲಿ ಮೀನು ಮರಿಗಳ ಸಮರ್ಪಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದಂತಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಎರಡು ತಿಂಗಳ ಮೀನುಗಾರಿಕೆ ನಿಷೇಧವನ್ನು ಮೂರು ತಿಂಗಳಿಗೆ ಏರಿಕೆ ಮಾಡಬೇಕೆಂದು ಕರ್ನಾಟಕ ಕರಾವಳಿ ಕ್ರಿಯಾ ಸಮಿತಿ ಎಂಬ ದ.ಕ.ಜಿಲ್ಲೆಯಿಂದ ಕಾರವಾರದವರೆಗೆ ಇರುವ ಮೀನುಗಾರರ ಒಕ್ಕೂಟ ನಿರ್ಧರಿಸಿದೆ.
ಏಕರೂಪದ ಕಾಯ್ದೆ ಜಾರಿಗೆ ಮನವಿ
ಆದ್ರೆ ಇದು ಕೇವಲ ಜಾಗೃತಿ ಮಾತ್ರ ಆಗದೆ ಕಾಯ್ದೆಯ ರೂಪದಲ್ಲಿ ಜಾರಿಗೊಳ್ಳಬೇಕೆಂಬ ಇರಾದೆಯನ್ನು ಹೊಂದಿರುವ ಸಮಿತಿಯು ಇದೀಗ ಕೇಂದ್ರ ಸರಕಾರದ ಕದ ತಟ್ಟಿದೆ. ಈಗಾಗಲೇ ಮೂರು ತಿಂಗಳ ಮೀನುಗಾರಿಕೆ ನಿಷೇಧಕ್ಕೆ ಗುಜರಾತ್‍ನಲ್ಲೂ ಮನವಿ ಬಂದಿದೆ. ಇದೇ ಮಾದರಿಯಲ್ಲಿ ಮಹಾರಾಷ್ಟ್ರ, ಕೇರಳ, ಗೋವಾದಲ್ಲೂ ಮೂರು ತಿಂಗಳ ನಿಷೇಧವಾದಲ್ಲಿ ಸಂಪೂರ್ಣ ಪಶ್ಚಿಮ ಕರಾವಳಿಯಲ್ಲಿ ಏಕರೂಪದ ಕಾಯ್ದೆ ಜಾರಿಗೆ ಬಂದು ಮತ್ಸ್ಯ ಸಂತತಿ ಹೆಚ್ಚಳವಾಗಲಿದೆ. ಕೇಂದ್ರ ಸರಕಾರದ ಮೀನುಗಾರಿಕಾ ಇಲಾಖೆ ಐದು ರಾಜ್ಯಗಳ ಸಭೆ ಕರೆದು ಇದಕ್ಕೊಂದು ನೀತಿ ಜಾರಿಗೊಳಿಸಬೇಕೆಂಬುದು ಕ್ರಿಯಾ ಸಮಿತಿಯ ಒತ್ತಾಯ.