ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಕಾರು ಆಂಧ್ರದ ಚಿತ್ತೂರು ಬಳಿ ಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿ ಕರ್ನಾಟಕದ ಐವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಜಿತ್ತೂರು ಜಿಲ್ಲೆಯ ಪಲಮನೇರು ಬಳಿ ಈ ಘಟನೆ ನಡೆದಿದ್ದು, ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.
ಮೃತರನ್ನು ಮೋಹನ್‌ದಾಸ್ (71), ನಾಗರಾಜ್ (61) ಕುಸುಮಾ (61) ಜಯಂತಿ (59) ಪೂಜಾ (33) ಎಂದು ಗುರುತಿಸಲಾಗಿದೆ.
ಮೃತರು ಬೆಂಗಳೂರಿನ ರಾಜಾಜಿ ನಗರದ ನಿವಾಸಿಗಳು ಎಂದು ಹೇಳಲಾಗುತ್ತಿದ್ದು, ಬೆಂಗಳೂರಿನಿಂದ ತಿರುಪತಿ ದೇಗುಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ,
ಅತಿ ವೇಗದಲ್ಲಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು,. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವಾಹನದಲ್ಲಿ ಸಿಲುಕಿದ್ದ ಶವಗಳನ್ನು ಹೊರತೆಗೆಯಲು ಹರಸಾಹಸಪಟ್ಟರು.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಅತಿವೇಗ ಹಾಗೂ ಚಾಲಕ ನಿದ್ರೆಗೆ ಜಾರಿದ್ದರಿಂದ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

