ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜ. 26 ರಿಂದ 28 ರವರೆಗೆ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದಲ್ಲಿ 16ನೇ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ- ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನವರಿ 26 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಸುಮಾರು 7000 ಸಂಖ್ಯೆಯ 26 ಜಾತಿಯ ಹೂವಿನ ಗಿಡಗಳಾದ ಪೆಟೂನಿಯ, ಸೆಲೋಷಿಯಾ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್, ಬಾಲ್ಸಮ್, ತೊರೇನಿಯ, ಗುಲಾಬಿ, ಟೆಕೋಮಾ, ದಾಸವಾಳ, ಪ್ಯಾನ್ಸಿ, ಇಂಪೇಷಿಯನ್ಸ್ ಹಾಗೂ ಮುಂತಾದ ಗಿಡಗಳನ್ನು ಜೋಡಿಸಲಾಗುವುದು. ಪ್ರಮುಖ ಆಕರ್ಷಣೆಯಾಗಿ ಸಾಲುಮರದ ತಿಮ್ಮಕ್ಕನವರ ಜೀವನ ಮತ್ತು ಸಾಧನೆಗಳ ಬಗ್ಗೆ ಕಲಾ ಕೃತಿಗಳ ಪ್ರದರ್ಶನ ನಡೆಯಲಿದೆ.
ಗುಲಾಬಿ, ಸೇವಂತಿಗೆ ಹಾಗೂ ಮುಂತಾದ ಹೂವುಗಳನ್ನು ಬಳಸಿ ವಿವಿಧ ಕಲಾಕೃತಿ, ತೆಂಗಿನ ಗರಿಗಳಿಂದ ಜಾನೂರ್ ಆರ್ಟ್ ಕಲಾಕೃತಿಗಳನ್ನು ತಯಾರಿಸಲಾಗುವುದು. ವಿವಿಧ ತರಕಾರಿಗಳ ಮಾದರಿ ಕೈತೋಟ ಪ್ರಾತ್ಯಕ್ಷತೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
26ರಂದು 11 ಗಂಟೆಗೆ ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣ ಕುರಿತು, 27- ರಂದು ಉಡುಪಿ ಜಿಲ್ಲೆಯ ಭೌಗೋಳಿಕ ಗುರುತಿಸುವಿಕೆ ಬೆಳೆಗಳಾದ ಉಡುಪಿ ಮಲ್ಲಿಗೆ ಹಾಗೂ ಮಟ್ಟು ಗುಳ್ಳ ಬದನೆ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಕುರಿತು, 28ರಂದು ಕೈತೋಟ ಮತ್ತು ತಾರಸಿ ತೋಟ ನಿಮಾರ್ಣ ಹಾಗೂ ನಿರ್ವಹಣೆ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸಲಾಗಿದೆ ಎಂದರು.
ನೋಂದಣಿಗೆ ಅವಕಾಶ- ರೈತರು ಬೆಳೆದಿರುವಂತಹ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರು ಬೆಳೆಗಳ ಪ್ರದರ್ಶಿಕೆಯನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಆಸಕ್ತರು ಜ. 25ರಂದು 3 ಗಂಟೆಗೆ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣದಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳುವುದು ಎಂದು ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಸಹಾಯಕ ನಿರ್ದೇಶಕ ನಿಧೀಶ್ ಮೊದಲಾದವರು ಉಪಸ್ಥಿತರಿದ್ದರು.

