ಉಡುಪಿಯಲ್ಲಿ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವಕ್ಕೆ ಚಾಲನೆ

0
10

ಜಗತ್ತಿನಲ್ಲಿ ಸಂಬoಧ ಕಟ್ಟಿಕೊಟ್ಟದ್ದೇ ಜನಪದ : ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್

ಉಡುಪಿ : ಜಗತ್ತು ಸಂತೋಷದಿoದಿರಲು ಕಲೆ ಬೇಕು. ಅಮ್ಮನ ಜೋಗುಳದಿಂದ ಹಿಡಿದು ಮಾನವನ ಪ್ರತೀ ಹಂತದಲ್ಲಿಯೂ ಜನಪದದ ಪ್ರಭಾವ ಇದ್ದೇ ಇದೆ. ಜನಪದ ಜಗತ್ತಿನಲ್ಲಿ ಸಂಬoಧವನ್ನು ಬೆಸೆದಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ಅವರು ಶುಕ್ರವಾರ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ ಉಡುಪಿ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ ಇವರ ಸಂಯುಕ್ತ ಸಹಕಾರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಜನಪದ ಇಲ್ಲದ ಜಾಗಗಳಿಲ್ಲ. ಜನಪದ ಜಗತ್ತನ್ನು ಸಾಕ್ಷಾತ್ಕರಿಸಿ ನಿಂತಿದೆ. ತತ್ವಪದ, ವಚನಗಳು, ಕೀರ್ತನೆ ಮೊದಲಾದವುಗಳನ್ನು ನಾಡಿಗೆ ನೀಡಿದ ಮಹನೀಯರ ಜೊತೆಗೆ ಜನಪದರು ನಿಂತಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಜಾನಪದ ಕಲೆಯನ್ನು ನಾಡಿನಾದ್ಯಂತ ಪ್ರದರ್ಶನ ನೀಡಿದಲ್ಲದೆ ಅನ್ಯ ರಾಜ್ಯಗಳ ಜಾನಪದ ಸಂಸ್ಕೃತಿಯನ್ನು ಉಡುಪಿ ಜನತೆ ನೋಡಿ ಆನಂದ ಪಡುವಂತೆ ಮಾಡಿರುವ ಉಡುಪಿಯ ಸಾಂಸ್ಕೃತಿಕ ಚಿಂತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ಸಾಧನೆ ಮಾದರಿಯಾಗಿದೆ ಎಂದು ಪ್ರಶಂಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಂಗಭೂಮಿ ಉಡುಪಿ ತನ್ನ ವಿಶಿಷ್ಟ ಚಟುವಟಿಕೆಗಳ ಮೂಲಕ ರಂಗಭೂಮಿಯ ವರ್ಚಸನ್ನು ಎತ್ತರಕ್ಕೇರಿಸಿದೆ. ಅನ್ಯ ರಾಜ್ಯಗಳ ಜನಪದ ನೃತ್ಯ ಪ್ರಕಾರಗಳನ್ನು ಜಿಲ್ಲೆಯಲ್ಲಿ ಪ್ರದರ್ಶನ ಮಾಡುತ್ತಿರುವುದೇ ಒಂದು ದೊಡ್ಡ ಸಾಧನೆ ಎಂದು ರಂಗಭೂಮಿ ಉಡುಪಿಯ ಸಾಧನೆಗಳ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ತಿನ ಉಡುಪಿ ಅಧ್ಯಕ್ಷರು ಹಾಗೂ ರಂಗಭೂಮಿ ಉಡುಪಿ ಅಧ್ಯಕ್ಷರೂ ಆಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ನಾಡಿನ ಜಾನಪದ ಕಲೆಗಳು ಉಳಿದು ಬೆಳೆಯುವಂತಾಗಬೇಕು ಎಂಬುದೇ ನನ್ನ ಹಿರಿದಾಸೆ. ಈ ನಿಟ್ಟಿನಲ್ಲಿ ಕಳೆದ 5 ವರ್ಷಗಳಿಂದ ರಂಗಭೂಮಿ ಉಡುಪಿ ಸಂಸ್ಥೆಯ ಸಹಕಾರದಲ್ಲಿ ಜಾನಪದ ಉತ್ಸವಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಳೆದ ವರ್ಷ ಕೇರಳದ ಜಾನಪದ ಸಂಸ್ಕೃತಿಯನ್ನು ಪರಿಚಯಿಸಲಾಗಿತ್ತು. ಇದೀಗ ಉತ್ತರ ಭಾರತದ 9 ರಾಜ್ಯಗಳ ಜಾನಪದ ನೃತ್ಯ ಪ್ರಕಾರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಯಕ್ಷಗಾನ, ನಾಟಕ ಕಲೆಗಳಿಗೆ ಸಿಗುವ ಪ್ರೋತ್ಸಾಹ ಜನಪದಕ್ಕೂ ಸಿಗಬೇಕು. ಜನಪದ ಸಂಸ್ಕೃತಿ ಬೆಳೆಯಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎo ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ್ ಶುಭ ಹಾರೈಸಿದರು. ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಗಜಾನನ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರಿಗೆ ‘ತಲ್ಲೂರ್ಸ್ ಜಾನಪದ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮಧ್ಯಪ್ರದೇಶ ಹಾಗೂ ಛತ್ತಿಸ್‌ಘಡ ರಾಜ್ಯಗಳ ಜಾನಪದ ಕಲಾ ವೈವಿಧ್ಯದ ಮೊದಲನೇ ಹಂತದ ಪ್ರದರ್ಶನ ಶುಕ್ರವಾರ ನಡೆಯಿತು. ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ್ ನಾಯಕ್ ನಿರೂಪಿಸಿದರು. ಈ ಜಾನಪದ ಉತ್ಸವ ಮಾ.7 ಮತ್ತು 8ರಂದು ಸಂಜೆ 6 ಗಂಟೆಯಿoದ ನಡೆಯಲಿದೆ. ಮಾ.8ರಂದು ಉತ್ಸವದ ಸಮಾರೋಪ ನಡೆಯಲಿದ್ದು, ಅಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ. ಶ್ಯಾಮ್ ಭಟ್ ಅವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಕೊಡ ಮಾಡುವ 2026ನೇ ಸಾಲಿನ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ಆರ್.ಎನ್.ಬಲ್ಲಾಳ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ವಂದಿಸಿದರು. ಅನುಷಾ ಆಚಾರ್ಯ ಪ್ರಶಸ್ತಿ ಪತ್ರ ವಾಚಿಸಿದರು. ವಿಷ್ಣುಮೂರ್ತಿ ಎನ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here