ಯುದ್ಧ ಸ್ಮಾರಕವು ಹುತಾತ್ಮ ಯೋಧರ ತ್ಯಾಗ ಬಲಿದಾನ, ದೇಶಪ್ರೇಮದ ಪ್ರತೀಕ – ರಾಜ್ಯಪಾಲ ಜಸ್ಟೀಸ್ ಅಬ್ದುಲ್ ನಜೀರ್
ಮೂಡುಬಿದಿರೆ: ಯುದ್ಧ ಸ್ಮಾರಕವು ಹುತಾತ್ಮ ಯೋಧರ ತ್ಯಾಗ ಬಲಿದಾನ, ದೇಶಪ್ರೇಮದ ಪ್ರತೀಕ. ನಮ್ಮ ನೆಮ್ಮದಿಯ ಜೀವನಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಸೈನಿಕರಿಗೆ ಸದಾ ಬೆಂಬಲ ನೀಡಬೇಕು. ಮೂಡುಬಿದಿರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಯುದ್ಧ ಸ್ಮಾರಕಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಆಂಧ್ರಪ್ರದೇಶ ರಾಜ್ಯಪಾಲ ಜಸ್ಟೀಸ್ ಅಬ್ದುಲ್ ನಜೀರ್ ಹೇಳಿದರು.
ಮಾಜಿ ಸೈನಿಕರ ವೇದಿಕೆ ಮೂಡುಬಿದಿರೆ, ತಾಲೂಕು ವತಿಯಿಂದವ ಮೂಡುಬಿದಿರೆ ಕಡಲಕೆರೆ ಬಳಿ ನೂತನವಾಗಿ ನಿರ್ಮಾಣವಾಗಲಿರುವ ಯುದ್ಧ ಸ್ಮಾರಕಕ್ಕೆ ಶುಕ್ರವಾರ ಸಾಯಂಕಾಲ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕರಾವಳಿ ಭಾಗದಿಂದ ಭಾರತೀಯ ಸೈನ್ಯಕ್ಕೆ ಸೇರುವ ಯುವಕರ ಸಂಖ್ಯೆ ಕಡಿಮೆಯಾಗಿದೆ. ಈ ಭಾಗದ ಯುವಜನರಲ್ಲಿ ದೇಶಸೇವೆಯ ಮನೋಭಾವವನ್ನು ಬೆಳೆಸಿ, ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸಬೇಕಿದೆ ಎಂದರು.
ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಯುದ್ಧ ಸ್ಮಾರಕದ ನೀಲನಕ್ಷೆ ಹಾಗೂ ಸ್ಟಾಂಪ್‌ಗಳನ್ನು ಬಿಡುಗಡೆಗೊಳಿಸಿದರು. ತಹಸೀಲ್ದಾರ್ ಶ್ರೀಧರ ಮುಂದಲಮುನಿ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಅವರು ಯುದ್ಧ ಸ್ಮಾರಕಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮಾಜಿ ಸೈನಿಕರ ಸಂಘಕ್ಕೆ ಹಸ್ತಾಂತರಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿಗಳಾದ ಶ್ರೀಪತಿ ಭಟ್,ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಜಯ್ ಫೆರ್ನಾಂಡೀಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಕಳ,ಮೂಡುಬಿದಿರೆ ವ್ಯಾಪ್ತಿಯನ್ನು ಒಳಗೊಂಡ ಸಂಘದಲ್ಲಿ 100ಕ್ಕೂ ಅಧಿಕ ಮಾಜಿ ಸೈನಿಕರು ಸದಸ್ಯರಾಗಿದ್ದು, ಸೈನಿಕರ ನಡುವೆ ಏಕತೆ ಮತ್ತು ಗೌರವವನ್ನು ಬೆಳೆಸಲು ಈ ಯುದ್ಧ ಸ್ಮಾರಕ ಸಹಕಾರಿಯಾಗಲಿದೆ ಎಂದರು. ಉಪನ್ಯಾಸಕ ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಅಲಂಗಾರು ಚರ್ಚ್ನ ಧರ್ಮಗುರು ಫಾ. ಮೆಲ್ವಿನ್ ನೊರೊನ್ಹಾ ಹಾಗೂ ಪುತ್ತಿಗೆ ನೂರಾನಿ ಮಸೀದಿಯ ಧರ್ಮಗುರು ಮೌಲಾನಾ ಝಿಯಾವುಲ್ಲ್ ಹಕ್ ಆಶೀರ್ವಚನ ನೀಡಿದರು. ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

