ಪಾದಯಾತ್ರೆ ಹೊರಟಿದ್ದ ನಾಲ್ವರ ಸಾವು

0
111


ಗದಗ: ಸೀಗೆ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ವಿವಿಧೆಡೆಯಿಂದ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಒಂದೆಡೆ ಖಾಸಗಿ ಬಸ್‌ ಹರಿದು ಮತ್ತು ಇನ್ನೊಂದೆಡೆ ಬೈಕ್‌ ಡಿಕ್ಕಿ ಹೊಡೆದು ಒಟ್ಟು ನಾಲ್ಕು ಜನ ಮೃತಪಟ್ಟಿದ್ದಾರೆ.
ಕೊಪ್ಪಳ ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ರಾತ್ರಿ ಪಾದಯಾತ್ರಿಗಳ ಮೇಲೆ ಬಸ್‌ ಹರಿದಿದ್ದರಿಂದ ಅನ್ನಪೂರ್ಣ (40), ಪ್ರಕಾಶ್ (25), ಶರಣಪ್ಪ (19) ಎಂಬುವರು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಾಯಗಳಾಗಿವೆ. ಈ ಘಟನೆಯಲ್ಲಿ ಮೃತಪಟ್ಟವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ತಳ್ಳಿಹಾಳ ಗ್ರಾಮದವರು.

ಹುಣ್ಣಿಮೆಗೆ ಎರಡು ದಿನಗಳ ಮೊದಲೇ ಪಾದಯಾತ್ರೆ ಆರಂಭಿಸಿದ್ದ ತಳ್ಳಿಹಾಳ ಗ್ರಾಮದ ಭಕ್ತರು ಮೂರ್ನಾಲ್ಕು ತಾಸು ಕಳೆದಿದ್ದರೆ ಹುಲಿಗಿ ತಲುಪುತ್ತಿದ್ದರು. ಬಸ್‌ ಹಾಯ್ದ ರಭಸಕ್ಕೆ ಮೂರು ಜನರ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ, ಗ್ರಾಮೀಣ ಸಿಪಿಐ ಸುರೇಶ ಡಿ. ಭೇಟಿ ನೀಡಿದರು.

ಕುಕನೂರು ತಾಲ್ಲೂಕಿನ ಭಾನಾಪುರದ ಬಳಿ ನಡೆದ ಇನ್ನೊಂದು ಘಟನೆಯಲ್ಲಿ ಪಾದಯಾತ್ರೆ ಹೊರಟಿದ್ದ ಕುಕನೂರಿನ ವೀರೇಶ ಹಳ್ಳಿಕೇರಿ (28) ಎಂಬ ಯುವಕ ಬೈಕ್‌ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಇವರ ತಂಡದಲ್ಲಿ ಒಟ್ಟು ಒಂಬತ್ತು ಜನ ಪಾದಯಾತ್ರೆಗೆ ಹೊರಟಿದ್ದರು.

ಪ್ರತಿ ಹುಣ್ಣಿಮೆ, ಮಂಗಳವಾರ ಹಾಗೂ ಶುಕ್ರವಾರದ ದಿನಗಳಂದ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಸಾಕಷ್ಟು ಜನ ಪಾದಯಾತ್ರೆ ತೆರಳುವುದು ಸಾಮಾನ್ಯ.

LEAVE A REPLY

Please enter your comment!
Please enter your name here