ಕರಾರ: (ಗೋಲ್ಡ್ ಕೋಸ್ಟ್): ಬಿಗು ಬೌಲಿಂಗ್ ದಾಳಿಯ ಮೂಲಕ ಸಾಧಾರಣ ಮೊತ್ತ ರಕ್ಷಿಸಿದ ಭಾರತ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮೇಲೆ 48 ರನ್‌ಗಳ ಸುಲಭ ಗೆಲುವು ಸಾಧಿಸಿತು. ಆ ಮೂಲಕ, ಸರಣಿಯಲ್ಲಿ ಇನ್ನೊಂದು ಪಂದ್ಯ ಉಳಿದಿರುವಂತೆ ಗುರುವಾರ 2-1 ಮುನ್ನಡೆ ಸಂಪಾದಿಸಿತು.
ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಮಧ್ಯಮ ವೇಗಿ ಶಿವಂ ದುಬೆ ಅವರು ತಲಾ ಎರಡು ವಿಕೆಟ್ ಪಡೆದು ಆತಿಥೇಯರನ್ನು ಒತ್ತಡಕ್ಕೆ ಸಿಲುಕಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಮೂರು ವಿಕೆಟ್ ಪಡೆದು ಗೆಲುವನ್ನು ತ್ವರಿತಗೊಳಿಸಿದರು.
ಸರಣಿಯ ಅಂತಿಮ ಪಂದ್ಯ ನವೆಂಬರ್ 8ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯ ಮಳೆಗೆ ತೊಳೆದುಹೋಗಿತ್ತು.
ಸಾಧಾರಣ ಮೊತ್ತ ಬೆಂಬತ್ತುವಾಗ ಒಂದು ಹಂತದಲ್ಲಿ, 11.3 ಓವರುಗಳಲ್ಲಿ 3 ವಿಕೆಟ್‌ಗೆ 91 ರನ್ ಗಳಿಸಿ ರನ್ ಚೇಸ್ ಉಮೇದಿನಲ್ಲಿದ್ದ ಆಸ್ಟ್ರೇಲಿಯಾ 18.2 ಓವರುಗಳಲ್ಲಿ 119 ರನ್‌ಗಳಿಗೆ ಕುಸಿಯಿತು. ಇದಕ್ಕೆ ಮೊದಲು ಭಾರತ 20 ಓವರುಗಳಲ್ಲಿ 8 ವಿಕೆಟ್‌ಗೆ 167 ರನ್ ಗಳಿಸಿತ್ತು.
ಆರಂಭ ಆಟಗಾರರಾದ ಮ್ಯಾಥ್ಯೂ ಶಾರ್ಟ್ (30, 24ಎ) ಮತ್ತು ಮಿಚೆಲ್ ಮಾರ್ಷ್ (25, 19ಎ) ಅವರು 5 ಓವರುಗಳಲ್ಲಿ 37 ರನ್ ಸೇರಿಸಿದ್ದರು. ನಂತರ ಮಧ್ಯಮ ಹಂತದ ಓವರುಗಳಲ್ಲಿ ವಿಕೆಟ್‌ಗಳು ನಿಯಮಿತವಾಗಿ ಬಿದ್ದವು. ಪವರ್‌ಪ್ಲೇಯೊಳಗೆ ಅಕ್ಷರ್ ಪಟೇಲ್ ಅವರು, ಶಾರ್ಟ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ದುಬೆ, ಎದುರಾಳಿ ನಾಯಕ ಮಾರ್ಷ್ ಮತ್ತು ಅಪಾಯಕಾರಿ ಆಟಗಾರ ಟಿಮ್ ಡೇವಿಡ್ (14) ವಿಕೆಟ್‌ಗಳನ್ನು ಪಡೆದಿದ್ದರು.
ಇದಕ್ಕೆ ಮೊದಲು ಭಾರತದ ಬ್ಯಾಟರ್‌ಗಳ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವ ಹಾಗಿರಲಿಲ್ಲ. ಅಭಿಷೇಕ್ ಶರ್ಮಾ (28, 21ಎ) ಮತ್ತು ಶುಭಮನ್ ಗಿಲ್ (46, 39ಎ) ಅವರು 56 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ನಂತರ ಅದೇ ಲಯ ಮುಂದುವರಿಯಲಿಲ್ಲ. ಜಂಪಾ ಅವರನ್ನು ನಿಭಾಯಿಸಲು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಶಿವಂ ದುಬೆ (22, 18ಎ) ಎದುರಾಳಿಗಳನ್ನು ಹೆಚ್ಚು ಕಾಡಲಿಲ್ಲ. ನಾಯಕ ಸೂರ್ಯಕುಮಾರ್ (20) ನಿರ್ಗಮಿಸುವ ಮೊದಲು ಎರಡು ಸಿಕ್ಸರ್ ಬಾರಿಸಿದರು.
ಕೊನೆಯಲ್ಲಿ ಅಕ್ಷರ್ ಪಟೇಲ್ 11 ಎಸೆತಗಳಲ್ಲಿ 21 ರನ್ ಬಾರಿಸಿದ್ದರಿಂದ ಮೊತ್ತ ಬೆಳೆಯಿತು.
ಆಸ್ಟ್ರೇಲಿಯಾ ಬೌಲರ್‌ಗಳ ಪರ ವೇಗಿ ನಥಾನ್ ಎಲಿಸ್ (4-0-21-3) ಪರಿಣಾಮಕಾರಿಯಾಗಿದ್ದರು. ಲೆಗ್ ಸ್ಪಿನ್ನರ್ ಜಂಪಾ 45 ರನ್ ತೆತ್ತರೂ ಅಪಾಯಕಾರಿ ಅಭಿಷೇಕ್ ಶರ್ಮಾ ಅವರನ್ನು ಸೇರಿ 3 ವಿಕೆಟ್‌ಗಳನ್ನು ಗಳಿಸಿದರು.

