ಗೆಳೆಯನಿಂದಲೇ ಗೆಳೆಯನ ಹತ್ಯೆ: ಸತ್ತು ಬಿದ್ದವನ ಮುಂದೆ ಡಾನ್ಸ್ ಮಾಡಿ ವಿಕೃತಿ

0
694

ಮೈಸೂರು: ಯುವಕನನ್ನು ಐವರ ತಂಡ ಬರ್ಬರವಾಗಿ ಕೊಲೆಗೈದ ಘಟನೆ ಮೈಸೂರು ಹೊರವಲಯದ ವರುಣ ಗ್ರಾಮದ ಹೋಟೆಲ್‌ ಮುಂಭಾಗ ಕಳೆದ ರಾತ್ರಿ ನಡೆದಿದೆ. ಕೊಲೆಯಾದ ಯುವಕನನ್ನು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್‌(33) ಎಂದು ಗುರುತಿಸಲಾಗಿದೆ.
ಒಂದು ಕಾಲದಲ್ಲಿ ಕಾರ್ತಿಕ್ ಜೊತೆಗೆ ಇದ್ದ ಆತನ ಕುಚಿಕು ಗೆಳೆಯ ಪ್ರವೀಣ್ ಹಾಗೂ ಗ್ಯಾಂಗ್ ಈ ಕೊಲೆ ಮಾಡಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಕಾರ್ತಿಕ್ ಪ್ರವೀಣ್ ನಡುವೆ ಕೆಲ ತಿಂಗಳ ಹಿಂದೆ ನಡೆಸಿದ್ದ ಗಲಾಟೆ. ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಲಾಟೆ ವೇಳೆ ಕಾರ್ತಿಕ್ ಪ್ರವೀಣ್ ಕೊಲೆ ಮಾಡುವ ಧಮ್ಕಿ ಹಾಕಿದ್ದನಂತೆ. ಕಾರ್ತಿಕ್ ತನ್ನನ್ನು ಕೊಲೆ ಮಾಡುತ್ತಾನೆ ಎನ್ನುವ ಭಯದಲ್ಲೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಕಾರ್ತಿಕನನ್ನೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಕಾರ್ತಿಕ್ ಸ್ನೇಹಿತರು ಹೇಳೋ ಪ್ರಕಾರ, ಕಾರ್ತಿಕ್ ಒಳ್ಳೆ ಮನುಷ್ಯ ಅಂತೆ. ಯಾರಿಗೂ ಕೆಟ್ಟದ್ದು ಬಯಸುತ್ತಿರಲಿಲ್ಲವಂತೆ. ಕಾರ್ತಿಕ್ ಜೊತೆಯಲ್ಲಿ ಇದ್ದೋರೋ ಆತನ ಹೆಸರು ಹೇಳಿ ದುಡ್ಡು ಮಾಡಿಕೊಂಡಿದ್ದರಂತೆ. ಈ ವಿಚಾರ ಗೊತ್ತಾಗಿ ಕಾರ್ತಿಕ್ ಅವರಿಗೆ ಬೈದು ಬುದ್ಧಿ ಹೇಳಿದ್ದನಂತೆ. ಅದೇ ದ್ವೇಷಕ್ಕೆ ನಿನ್ನೆ ಕೊಲೆ ಮಾಡಿದ್ದಾರೆ ಅನ್ನೋದು ಅವರ ಅಭಿಪ್ರಾಯ.
ಇನ್ನು ಕಾರ್ತಿಕ್ ಚಿಕ್ಕಹಳ್ಳಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ. ಜೊತೆಗೆ ಕಾರ್ತಿಕ್ ರೌಡಿಶೀಟರ್ ಆಗಿದ್ದ. ರೌಡಿ ಶೀಟರ್ ಆಗಿರುವುದರಿಂದ ಆತನನ್ನು ಗಡಿಪಾರು ಮಾಡಲಾಗಿತ್ತು. ಹೀಗಾಗಿ ಆತ ತನ್ನ ಮನೆಗೆ ಹೋಗದೆ ವರುಣ ಹತ್ತಿರ ಇರುವ ಹೋಟೆಲ್‌ನಲ್ಲಿದ್ದ.

ಕಾರ್ತಿಕ್​ ಹತ್ಯೆ ಹಿಂದೆ ಮಹಿಳೆಯ ಕರಿನೆರಳು

ಕಾರ್ತಿಕ್ ತಾಯಿ ಪ್ರಕಾರ, ಈ‌ ಕೊಲೆಗೆ ಲಕ್ಷ್ಮೀ ಎನ್ನುವ ಮಹಿಳೆ ಕಾರಣವಂತೆ. ಆಕೆಯ ಕಾರಣವಾಗಿ ಈ ಕೊಲೆ ನಡೆದಿದೆಯಂತೆ. ರಾತ್ರಿ ಆಕೆ ಕಾರ್ತಿಕ್​ಗೆ ಕರೆ ಮಾಡಿ ಊಟಕ್ಕೆ ಬಾ ಎಂದು ಕರೆದಿದ್ದರಂತೆ. ಊಟ ಮುಗಿಸಿ ಹೋಗುವಾಗ ಲಕ್ಷ್ಮಿ ಎನ್ನುವ ಹುಡುಗಿ ಕರೆ ಮಾಡಿದ್ದಳಂತೆ. ಆಕೆ ಕರೆ ಬಳಿಕ ಕಾರ್ತಿಕ್ ಮನೆಯಿಂದ ತೆರಳಿದ್ದನಂತೆ. ಅಲ್ಲಿಂದ ನೇರವಾಗಿ ಕಾರ್ತಿಕ್ ಹೋಟೆಲ್ ‌ಗೆ ಹೋಗಿದ್ದಾನೆ . ಅಲ್ಲಿ ಪ್ರವೀಣ್ ಎಂಬಾತ ತನ್ನ ಗ್ಯಾಂಗ್ ಜೊತೆ ಸೇರಿ ಕಾರ್ತಿಕ್‌ಗೆ ಹೊಡೆದಿದ್ದಾನೆ.


ಸತ್ತು ಬಿದ್ದ ಕಾರ್ತಿಕ್​ ಮುಂದೆ ಡಾನ್ಸ್​

ಇನ್ನು ಪ್ರವೀಣ್, ಕಾರ್ತಿಕ್ ಜೊತೆಯೇ ಇದ್ದನಂತೆ. ಇದೇ ಲಕ್ಷ್ಮೀ ವಿಚಾರಕ್ಕೆ ಈ ಹಿಂದೆ ಕಾರ್ತಿಕ್ ಪ್ರವೀಣ್ ನಡುವೆ ಗಲಾಟೆಯಾಗಿತ್ತಂತೆ. ಕಾರ್ತಿಕ್ ಪ್ರವೀಣ್ ಗೆ ಬೈದು ಕಳುಹಿಸಿದ್ದನಂತೆ. ನಂತರ ಒಂದೂವರೆ ವರ್ಷದ ತನಕ ಆತ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲವಂತೆ. ಇದರ‌ ಜೊತೆಗೆ ಕಾರ್ತಿಕ್ ಬಡ್ಡಿ ವ್ಯವಹಾರ ಕೂಡ ನಡೆಸುತ್ತಿದ್ದನಂತೆ. ಹಣಕಾಸಿನ ವೈಷಮ್ಯಕ್ಕೂ ಕಾರ್ತಿಕ್ ಕೊಲೆ ಆಗಿರಬಹುದು ಎಂದು ಶಂಕಿಸಲಾಗ್ತಿದೆ. ಈ ನಡುವೆ ಕೊಲೆ ಮಾಡಿದ ಬಳಿಕ ಶವದ ವಿಡಿಯೋ ಮಾಡಿಕೊಂಡು,‌ ಡ್ಯಾನ್ಸ್ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.

ಈ ಸಂಬಂಧ ವರುಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಕಾರ್ತಿಕ್ ಕೊಲೆಯಿಂದ‌ ಮೈಸೂರು ಬೆಚ್ಚಿ ಬಿದ್ದಿದೆ. ತಣ್ಣಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಸೇಡಿನ ಕೊಲೆಗಳು ನಡೆಯುತ್ತಾ ಅನ್ನೋ ಅನುಮಾನ ಮೂಡಿಸಿದೆ. ಇದಕ್ಕೆ ಪೊಲೀಸರು ಯಾವ ರೀತಿ ಕಡಿವಾಣ ಹಾಕ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here