89ನೇ ವಯಸ್ಸಿನಲ್ಲಿ ತಮ್ಮ ಬದುಕಿನ ಯಾನ ಮುಗಿಸಿದ ಗಡ್ಡಪ್ಪ: ಚನ್ನೇಗೌಡರಿಗೆ ಆಪ್ತದಿಂದ ಕಣ್ಣೀರ ವಿದಾಯ

0
73


ಗಡಪ್ಪ: 89ನೇ ವಯಸ್ಸಿನಲ್ಲಿ ನಿಧನ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ‘ತಿಥಿ’ ಚಿತ್ರದ ಮೂಲಕ ಮನೆ ಮಾತಾಗಿದ್ದ, ಮಂಡ್ಯ ಜಿಲ್ಲೆಯ ಹಿರಿಯ ನಟ ಗಡ್ಡಪ್ಪ ಎಂದೇ ಪ್ರಸಿದ್ಧರಾಗಿದ್ದ ಚನ್ನೇಗೌಡ (89) ಅವರು ಇಂದು (ನವೆಂಬರ್ 12) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಗ್ರಾಮದಲ್ಲೇ ಅಂತ್ಯಕ್ರಿಯೆ
ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದವರಾಗಿದ್ದ ಚನ್ನೇಗೌಡ ಅವರು, ತಮ್ಮ ಮೂಲ ಹೆಸರಿಗಿಂತ ‘ಗಡ್ಡಪ್ಪ’ ಎಂದೇ ನಾಡಿನಾದ್ಯಂತ ಗುರುತಿಸಿಕೊಂಡಿದ್ದರು. ಕಳೆದ ಒಂದು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟಾಗಿತ್ತು ಮತ್ತು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಇದರ ಜೊತೆಗೆ ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ನಿಧನರಾಗಿದ್ದಾರೆ.

ಮೃತರ ಪುತ್ರಿ ಶೋಭಾ ಅವರು ಈ ವಿಷಯವನ್ನು ದೃಢಪಡಿಸಿದ್ದು, ಇಂದು ಸಂಜೆ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಗಡ್ಡಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

8 ಸಿನಿಮಾಗಳಲ್ಲಿ ಅಭಿನಯ
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದ ನಿರ್ದೇಶಕ ರಾಮ್ ರೆಡ್ಡಿ ಅವರ ‘ತಿಥಿ’ ಚಿತ್ರದ ಮೂಲಕ ಗಡ್ಡಪ್ಪ ಅವರು ದೇಶದಾದ್ಯಂತ ಗಮನ ಸೆಳೆದರು. ಈ ಸಿನಿಮಾದಲ್ಲಿನ ಅವರ ಸಹಜ ಅಭಿನಯಕ್ಕೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

‘ತಿಥಿ’ ಚಿತ್ರದ ನಂತರ ಅವರು ‘ತರ್ಲೆ ವಿಲೇಜ್’, ‘ಜಾನಿ ಮೇರಾ ನಾಮ್’, ‘ಹಳ್ಳಿ ಪಂಚಾಯಿತಿ’ ಸೇರಿದಂತೆ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತಮ್ಮ ಸಹಜತೆ ಮತ್ತು ವಿಶಿಷ್ಟ ಶೈಲಿಯಿಂದಾಗಿ ಗಡ್ಡಪ್ಪ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಗಡ್ಡಪ್ಪ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here