ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಭಾನುವಾರ ತಮಿಳುನಾಡಿನ ಕೊಯಮತ್ತೂರಿನವಿಮಾನ ನಿಲ್ದಾಣದ ಬಳಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿದ್ದರು. ನಂತರ ಅವರನ್ನು ಬಂಧಿಸಿದ್ದರು. ಆದರೆ, ಪೊಲೀಸರು ಮೂವರು ಶಂಕಿತ ಆರೋಪಿಗಳನ್ನು ಬಂಧಿಸಿದ್ದರೂ ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸರು ತೋರಿಸಿದ ಸುಮಾರು 60 ಶಂಕಿತರ ಫೋಟೋಗಳಲ್ಲಿ ಯಾರೊಬ್ಬರನ್ನೂ ಇನ್ನೂ ಗುರುತಿಸಿಲ್ಲ.
ಭಾನುವಾರ ರಾತ್ರಿ 10.30ರ ಸುಮಾರಿಗೆ ಮೂವರು ಪುರುಷರು ಮೊಪೆಡ್‌ನಲ್ಲಿ ಬಂದು, ಕಾರಿನ ವಿಂಡ್ ಷೀಲ್ಡ್ ಅನ್ನು ಪುಡಿಮಾಡಿ, ಆ ಯುವತಿಯ ಗೆಳೆಯನ ಮೇಲೆ ದಾಳಿ ಮಾಡಿದ್ದರು. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಪದೇಪದೆ ಅತ್ಯಾಚಾರ ನಡೆಸಿದ್ದರು.
ರಾತ್ರಿ 11 ಗಂಟೆ ಸುಮಾರಿಗೆ ಆಕೆಯ ಗೆಳೆಯ ಪೀಲಮೇಡು ಪೊಲೀಸರನ್ನು ಸಂಪರ್ಕಿಸಿದ್ದ. ಆ ರಾತ್ರಿಯೇ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸಿದ್ದರು. ಸೋಮವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ವಿವಸ್ತ್ರಳಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆ ಯುವತಿ ಪೊಲೀಸರಿಗೆ ಸಿಕ್ಕಿದ್ದಳು. ವೈದ್ಯಕೀಯ ಚಿಕಿತ್ಸೆಗಾಗಿ, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಮೂವರು ಶಂಕಿತರಾದ ಸತೀಶ್, ಗುಣ ಮತ್ತು ಕಾರ್ತಿಕ್ ಎಂಬುವವರ ಮೇಲೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರೆಲ್ಲರೂ ಮಧುರೈ ಜಿಲ್ಲೆಯಿಂದ ಬಂದವರು ಮತ್ತು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೊಯಮತ್ತೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಗುಂಡೇಟಿನಿಂದಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತ್ಯಾಚಾರಕ್ಕೊಳಗಾದ ಯುವತಿಗೆ ಶಂಕಿತರ 60ಕ್ಕೂ ಹೆಚ್ಚು ಫೋಟೋಗಳನ್ನು ನೀಡಲಾಗಿದ್ದರೂ ಆಕೆ ತನ್ನ ಮೇಲೆ ದಾಳಿ ನಡೆಸಿದವರನ್ನು ಇನ್ನೂ ಗುರುತಿಸಲು ಸಾಧ್ಯವಾಗಲಿಲ್ಲ. ಪೊಲೀಸ್ ಮೂಲದ ಪ್ರಕಾರ, ಆ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಕೂಡ ಅವರ ಮುಖಗಳನ್ನು ಸೆರೆಹಿಡಿಯಲು ಸಾಧ್ಯವಾಗಿಲ್ಲ. ಆಘಾತಕ್ಕೊಳಗಾಗಿರುವ ಯುವತಿ ಚೇತರಿಸಿಕೊಂಡ ನಂತರ ಆಕೆಯನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಗುವುದು, ಆಗ ಆಕೆ ಅಪರಾಧಿಗಳನ್ನು ಕಂಡುಹಿಡಿಯುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

