ಉಡುಪಿ : ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಪರಿಣಾಮ ಉಡುಪಿ ಜಿಲ್ಲೆಯಾದ್ಯಂತ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಜಿಲ್ಲೆಯ ಹಲವು ಸಣ್ಣ ಸಣ್ಣ ಹೊಟೇಲುಗಳು ಹಾಗೂ ಕ್ಯಾಂಟಿನ್‌ಗಳು ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿರುವುದು ವರದಿಯಾಗಿದೆ.
ಕೆಲವು ಗ್ಯಾಸ್ ವಿತರಕರು ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವ ಬಗ್ಗೆ ಸೂಚನೆ ನೀಡಿದ್ದು, ಇದು ಹೊಟೇಲ್ ಉದ್ಯಮ, ಪ್ರವಾಸೋದ್ಯಮ, ಶುಭ ಸಮಾರಂಭಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಇದರಿಂದ ವ್ಯವಹಾರಗಳು ಸ್ಥಗಿತಗೊಂಡು ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.
‘ಯುದ್ಧ ಪರಿಣಾಮ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಹೊಟೇಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಇದರ ಬಿಸಿ ಪ್ರವಾಸೋದ್ಯಮಕ್ಕೂ ತಟ್ಟುತ್ತಿದೆ. ನಮಗೆ ಪ್ರತಿದಿನ 2-3 ವಾಣಿಜ್ಯ ಸಿಲಿಡಂರ್ ಗಳ ಅಗತ್ಯ ಇರುತ್ತದೆ. ಆದರೆ ನಿನ್ನೆ ಕೇವಲ ಎರಡು ಸಿಲಿಂಡರ್ ಮಾತ್ರ ಪೂರೈಕೆಯಾಗಿದೆ. ಇಂದು ಇನ್ನೂ ಯಾವುದೇ ಸಿಲಿಂಡರ್ ಬಂದಿಲ್ಲ. ಹೀಗೆ ಮುಂದುವರೆದರೆ ನಾವು ಕೂಡ ಹೊಟೇಲ್ ಬಂದ್ ಮಾಡ ಬೇಕಾಗುತ್ತದೆ. ಆದುದರಿಂದ ಪ್ರಧಾನ ಮಂತ್ರಿ ಕೂಡಲೇ ಮಧ್ಯ ಪ್ರವೇಶಿಸಿ ಈ ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೊಟೇಲ್ ಉದ್ಯಮಿ ಕೃಷ್ಣ ಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಹೊಟೇಲುಗಳ ಸಂಘದ ರಾಜ್ಯ ಉಪಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯಿಸಿ, ಉಡುಪಿ ಜಿಲ್ಲೆಯಲ್ಲಿ ಸಣ್ಣಪುಟ್ಟ ಸೇರಿದಂತೆ ಒಟ್ಟು 2500 ಹೊಟೇಲ್‌ಗಳಿವೆ. ಪ್ರಸ್ತುತ ಇವುಗಳಿಗೆ ಒಂದೆರೆಡು ಸಿಲಿಂಡರ್ ಪೂರೈಕೆ ಮಾಡುವುದಾದರೂ ಪ್ರತಿದಿನ 5000 ಸಿಲಿಂಡರ್ ಬೇಕಾಗುತ್ತದೆ. ಆದರೆ ಆ ಪ್ರಮಾಣದಲ್ಲಿ ಸಿಲಿಂಡರ್ ಪೂರೈಕೆ ಆಗುತ್ತಿಲ್ಲ. ಆದುದರಿಂದ ಎರಡು ಮೂರು ದಿನಗಳಲ್ಲಿ ಬಹುತೇಕ ಹೊಟೇಲ್‌ಗಳು ಬಂದ್ ಆಗುವ ಸಾಧ್ಯತೆ ಇವೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಕೆಲವು ಸಣ್ಣ ಹೊಟೇಲುಗಳು ಬೆಳಗ್ಗೆಯಿಂದಲೇ ಬಾಗಿಲು ಮುಚ್ಚಿ ವ್ಯವಹಾರ ಸ್ಥಗಿತಗೊಳಿಸಿದರೆ, ಇನ್ನು ಕೆಲವು ಹೊಟೇಲುಗಳು ಮಧ್ಯಾಹ್ನದ ವರೆಗೆ ಮಾತ್ರ ವ್ಯವಹಾರ ನಡೆಸಿದೆ. ಇನ್ನು ಕೆಲವು ಸಂಜೆಯ ಬಳಿಕ ಬಂದ್ ಮಾಡಿರುವುದು ಕಂಡುಬಂದಿದೆ. ಇದೆಲ್ಲವೂ ಜನಸಾಮಾನ್ಯರ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.
‘ಗ್ಯಾಸ್ ಕೊರತೆಯಿಂದ ಬಡವರು, ಮಾಧ್ಯಮ ವರ್ಗದವರು ನಡೆಸುತ್ತಿ ರುವ ಹೊಟೇಲ್, ಕ್ಯಾಂಟಿನ್‌ಗಳಿಗೆ ದೊಡ್ಡೆ ಹೊಡೆತ ಬೀಳುತ್ತಿವೆ. ಇದರಿಂದ ಇವರೆಲ್ಲ ಉದ್ಯೋಗ ಇಲ್ಲದೆ ಅಪಾರ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಈಗ ವಾಣಿಜ್ಯ, ಮುಂದೆ ಗೃಹ ಬಳಕೆ, ನಂತರ ಆಸ್ಪತ್ರೆಯ ಆಕ್ಸಿಜನ್ ಗ್ಯಾಸ್ ಗಳಿಗೂ ಪರದಾಡುವ ಸ್ಥಿತಿ ಎದುರಾಗ ಬಹುದು ಎಂದು ಹೊಟೇಲ್ ಮಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

