ಸಂಜೆ ಪ್ರಭ ಬೆಂಗಳೂರು: ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ಚಿಕಿತ್ಸಾ ವೆಚ್ಚ ಭರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲೂ 2 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಗೆ ಕೇಂದ್ರ ಕಚೇರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಭೆಯ ನಂತರ ಪತ್ರಕರ್ತರು ಸಾಮೂಹಿಕವಾಗಿ ಭೇಟಿ ಮಾಡಿ ಈ ಹಿಂದೆ ಬಿಬಿಎಂಪಿಯ ಬಜೆಟ್ ನಲ್ಲಿ ನಿಗದಿ ಮಾಡುತ್ತಿದ್ದಂತೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿಯೂ ಪತ್ರಕರ್ತರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಎರಡು ಕೋಟಿ ಮೀಸಲಿಡಬೇಕೆಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಮಾತನಾಡಿ ಪತ್ರಕರ್ತರ ಚಿಕಿತ್ಸಾ ವೆಚ್ಚದ ಹಣವನ್ನು 5 ಪಾಲಿಕೆಗಳಲ್ಲಿ ಪ್ರತ್ಯೇಕವಾಗಿ ನೀಡುವ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕವೇ ನೀಡುವುದು ಸೂಕ್ತ.
5ನಗರ ಪಾಲಿಕೆಗಳಲ್ಲಿ ಪ್ರತ್ಯೇಕವಾಗಿ ಬಜೆಟ್ ನಲ್ಲಿ ಹಣ ನಿಗದಿ ಮಾಡಿದರೆ ಅದು ದುರ್ಬಳಕೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಪತ್ರಕರ್ತರ ಚಿಕಿತ್ಸೆಗೆ ಬಳಕೆಯಾಗಬೇಕೆಂದರೆ ಏಕ ಮಾರ್ಗದಲ್ಲಿ ನೀಡುವಂತಾಗಬೇಕು.
ಜಿಬಿಎ ಅನುದಾನದಲ್ಲೇ ಪತ್ರಕರ್ತರಿಗೆ ಹಣ ನಿಗದಿ ಮಾಡಿ ಅದರ ಮೂಲಕ ನಿಯಮದ ಪ್ರಕಾರ ಹಂಚಿಕೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, “ಸಂಜೆ ಎಕ್ಸ್ ಪ್ರೆಸ್” ಸಂಪಾದಕರಾದ ಚಂದ್ರಶೇಖರ್, “ಪ್ರಜಾ ವಾಹಿನಿ”ಸಂಪಾದಕರಾದ ಎನ್.ಕೆ.ಸ್ವಾಮಿ, “ಸಂಜೆ ಪ್ರಭ” ಸಂಪಾದಕರಾದ ವೆಂಕಟೇಶ್ ಪೖ, ಪತ್ರಕರ್ತರಾದ ಗಣೇಶ್, ಯಾಖೂಬ್, ಆರಾಧ್ಯಛಾಯಾಗ್ರಾಹಕರಾದ ಪ್ರಭು ಮುಂತಾದವರು ಉಪಸ್ಥಿತರಿದ್ದರು