ಉಡುಪಿ: ದೇಶದಲ್ಲಿ ಜಿಎಸ್ಟಿ ಅನುಷ್ಠಾನದ ಬಳಿಕ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೊಂಡಿದೆ. ಇದರಿಂದ ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದ್ದು, ಜಿಎಸ್ಟಿ ದರ ಇಳಿಕೆಯಿಂದ ಜಿಡಿಪಿ ಏರಿಕೆಯಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠ ಆಶ್ರಯದಲ್ಲಿ “ಮುಂದಿನ ಪೀಳಿಗೆ ಜಿಎಸ್ಟಿ 2.0′ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜಿಎಸ್ಟಿ ಸುಧಾರಣೆಯಿಂದ ಸುಮಾರು 48 ಸಾವಿರ ಕೋಟಿ ರೂ. ಆರ್ಥಿಕ ಕೊರತೆ ಉಂಟಾಗಲಿದೆ. ಕೇಂದ್ರಕ್ಕೆ 24 ಸಾವಿರ ಕೋಟಿರೂ. ನಷ್ಟವಾಗಲಿದೆ. ಆದರೆ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದರ ಇಳಿಕೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಅರ್ಥ ಶಾಸ್ತ್ರಜ್ಞ ವಿಶ್ವನಾಥ ಭಟ್ ಮಾತನಾಡಿ, ನೆಲಕಚ್ಚಿದ್ದ ಭಾರತದ ಆರ್ಥಿಕತೆ ಸುಧಾರಣೆಯಲ್ಲಿ ಜಿ ಎಸ್ ಟಿ ಹೆಚ್ಚಿನ ಪರಿಣಾಮ ಬೀರಿದೆ. ರಾಜ್ಯ ಅಥವಾ ದೇಶದ ಪ್ರಗತಿಗೆ ತೆರಿಗೆ ಅತೀ ಅಗತ್ಯ. ಆದಾಯ ತೆರಿಗೆ ಮಿತಿ 12 ಲಕ್ಷಕ್ಕೆ ಏರಿಕೆ ಮಾಡಿರುವುದರಿಂದ ಕೇಂದ್ರ ಸರ್ಕಾರಕ್ಕೆ 1 ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ. ಆದರೂ ಜನರ ಅನುಕೂಲಕ್ಕಾಗಿ ಕಾಲಕಾಲಕ್ಕೆ ತೆರಿಗೆಯಲ್ಲಿ ಬದಲಾವಣೆಗಳನ್ನು ಸರ್ಕಾರ ಮಾಡುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರ್ಥಿಕ ಪ್ರಕೋಷ್ಠ ಸಂಚಾಲಕ ದಿವಾಕರ ಶೆಟ್ಟಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಗರಸಭಾ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ರೇಶ್ಮಾ ಉದಯ್ ಶೆಟ್ಟಿ ಮೊದಲಾದವರಿದ್ದರು. ಪ್ರ.ಕಾ. ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು