ಮಂಗಳೂರು: ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ನಡೆಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾ.10ರಂದು ವಜಾಗೊಳಿಸಿದೆ.
ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪ್ರಾಣಿ ಹಕ್ಕುಗಳ ಸಂಘಟನೆ ‘ಪೇಟಾ’ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬೆಂಗಳೂರಿನ ಕಂಬಳ ಆಯೋಜಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೇಟಾ ಪರ ವಕೀಲರು, ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳಲ್ಲಿ ಇದು ಸಾಂಪ್ರದಾಯಿಕ ಕ್ರೀಡೆಯಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ‘ಬೆಂಗಳೂರಿನ ಸಂಪ್ರದಾಯ ಮತ್ತು ಸಂಸ್ಕೃತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಈಗ ಈ ಕಾರ್ಯಕ್ರಮವನ್ನು ರಾಜ್ಯ ರಾಜಧಾನಿಯಲ್ಲಿ ನಡೆಸಲಾಗುತ್ತಿದೆ’ ಎಂದು ಹೇಳಿದರು. ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ಪೀಠವು, ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುವ ಹಕ್ಕನ್ನು ಎತ್ತಿ ಹಿಡಿದಿದೆ.
‘ರಾಜ್ಯದ ಬೇರೆ ಭಾಗದ ಜನರು ಈ ಕ್ರೀಡೆ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳಲಿ. ಇದಕ್ಕೆ ಯಾವುದೇ ಅಡೆತಡೆ ಬೇಡ. ಒಂದು ಸಂಸ್ಕೃತಿಯನ್ನ ರಾಜ್ಯದ ಇತರ ಭಾಗಗಳ ಜನರಿಗೂ ಪರಿಚಯಿಸುವುದರಲ್ಲಿ ತಪ್ಪೇನಿದೆ? ಅದನ್ನು ಕೇವಲ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಏಕೆ ಸೀಮಿತಗೊಳಿಸಬೇಕು’ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಮೆಹ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅರ್ಜಿಯನ್ನು ವಜಾಗೊಳಿಸುವ ವೇಳೆ ಪೀಠವು, ‘ಮುಂಬರುವ ದಿನಗಳಲ್ಲಿ ನಾವು ಪೇಟಾ ಸಂಘಟನೆಗೂ ಕೆಲವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ’ ಎಂದು ಹೇಳಿದರು.
ಇದೀಗ ಮತ್ತೊಂದು ಐತಿಹಾಸಿಕ ತೀರ್ಪಿನೊಂದಿಗೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಂಬಳ ಆಯೋಜಿಸಲು ಇದ್ದ ಅಡ್ಡಿಗಳು ದೂರವಾದಂತಾಗಿದೆ. ತುಳುನಾಡಿನ ಹೆಮ್ಮೆಯ ಸಂಪ್ರದಾಯವನ್ನು ದೇಶದಾದ್ಯಂತ ಪಸರಿಸಲು ಉತ್ಸುಕರಾಗಿರುವ ಕಂಬಳಾಭಿಮಾನಿಗಳಿಗೆ ಈ ತೀರ್ಪು ಭಾರಿ ಖುಷಿ ನೀಡುವುದರಲ್ಲಿ ಸಂದೇಹವೇ ಇಲ್ಲ ಎನ್ನಬಹುದು.
ರಾಜ್ಯ ಸರ್ಕಾರ ಕಂಬಳಕ್ಕೆ ರಾಜ್ಯ ಮಾನ್ಯತೆ ನೀಡಿದ ನಂತರ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಸತತ ನ್ಯಾಯಾಲಯಗಳಲ್ಲೂ ಜಯ ದೊರಕಿರುವುದು ಸಂತಸ ತಂದಿದೆ. ಮಾನ್ಯ ಉಚ್ಚ ನ್ಯಾಯಾಲಯ ದಾವದೆಗಳನ್ನು ವಜಾಗೊಳಿಸುವುದರೊಂದಿಗೆ ಸರ್ವೋಚ್ಚ ನ್ಯಾಯಾಲಯ ಕೂಡ ಅವರ ವಾದವನ್ನು ವಜಾಗೊಳಿಸಿ ಪೇಟಾದವರನ್ನು ಪ್ರಶ್ನಿಸುವ ನ್ಯಾಯಾಲಯ ಕಂಬಳಕ್ಕೆ ಬೆಂಬಲ ನೀಡಿರುವುದು ನಿಜಕ್ಕೂ ಸ್ವಾಗತಾರ್ಹ. ಪೇಟದವರ ಕಾರ್ಯವೈಖರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು, ಪೇಟಾದವರು ನ್ಯಾಯಾಲಯದ ಅನಗತ್ಯ ಕಾಲಹರಣ ಮಾಡಬಾರದು. ಸಂಸ್ಕೃತಿ ಮತ್ತು ಕ್ರೀಡೆಯನ್ನು ದೇಶದ ಯಾವ ಮೂಲೆಯಲ್ಲೂ ಕೂಡ ಬಿಂಬಿಸುವ ಅಧಿಕಾರವು ಆ ಕ್ರೀಡೆಗೆ ಇರುತ್ತದೆ ಎಂಬುದನ್ನು ಎತ್ತಿ ಹಿಡಿದ್ದಾರೆ. ಇದರಿಂದ ಕಂಬಳ ರಾಷ್ಟ ಕ್ರೀಡೆಯಾಗಿ ಕೂಡ ಮೂಡಿ ಬಂದಿರುವುದು ಸ್ವಾಗತಾರ್ಹ ನಮ್ಮ ನ್ಯಾಯಾಲಯದ ತೀರ್ಪಿಗೆ ನಾವು ತಲೆ ಬಾಗಿ ಅಭಿನಂದಿಸುತ್ತೇವೆ ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

