ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರ ಜಿಲ್ಲೆಯ ಹಲವು ದೇವಸ್ಥಾನ, ಮನೆಗಳಲ್ಲಿ ಬೆಳಗ್ಗೆ ಗೋಪೂಜೆ, ವಾಹನ ಪೂಜೆ ನಡೆಯಿತು. ರಾತ್ರಿ ಕಾರ್ತೀಕ ಮಾಸದ ತುಳಸಿ ಪೂಜೆ ಪ್ರಾರಂಭವಾಗಿದೆ.
ವಿವಿಧ ದೇವಸ್ಥಾನಗಳ ಮುಂಭಾಗದಲ್ಲಿ ಜನರುವಾಹನಗಳನ್ನು ಅಲಂಕರಿಸಿ, ಅರ್ಚಕರ ಮೂಲಕ ಪೂಜೆ ನೆರವೇರಿಸಿದರು. ದೇವಸ್ಥಾನದ ಗೋಶಾಲೆಗಳು, ಹಟ್ಟಿಗಳಲ್ಲಿ ಗೋಪೂಜೆ ನಡೆಯಿತು.
ಕೃಷ್ಣ ಮಠದಲ್ಲಿ ಗೋಪೂಜೆ
ಕೃಷ್ಣಮಠದಲ್ಲಿ ಗೋಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕನಕ ಗೋಪುರದ ಎದುರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಗೋವುಗಳಿಗೆ ವಿಶೇಷ ಗೋಗ್ರಾಸ ನೀಡಿದರು. ನಂತರ ರಥಬೀದಿಯ ಸುತ್ತಲೂ ಗೋವುಗಳ ವೈಭವದ ಮೆರವಣಿಗೆ ನಡೆಯಿತು.ಮಠದ ಆವರಣದಲ್ಲಿ ಸಂಕಲ್ಪ ಸಹಿತ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಿತು. ಮಠದ ದಿವಾನ್ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ರಾತ್ರಿ ಕಾರ್ತಿಕ ಮಾಸದ ತುಳಸೀ ಸಂಕೀರ್ತನೆ ಆರಂಭವಾಯಿತು. ತೆಂಕಪೇಟೆ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿ ಗೋಪೂಜೆ ನಡೆಯಿತು.