ಗೋವರ್ಧನ ಪೂಜೆ – ಪ್ರಕೃತಿ, ಕೃಷಿ ಮತ್ತು ಭಕ್ತಿಯ ಹಬ್ಬ

0
22

ಗೋವರ್ಧನ ಪೂಜೆ ಹಿಂದು ಧರ್ಮದಲ್ಲಿ ದೀಪಾವಳಿಯ ನಂತರದ ದಿನ ಆಚರಿಸಲಾಗುವ ಮಹತ್ವದ ಹಬ್ಬವಾಗಿದೆ. ಈ ದಿನ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿ ಗೋಕುಳದ ಜನರನ್ನು ಇಂದ್ರನ ಕೋಪದಿಂದ ರಕ್ಷಿಸಿದ ದಿನವೆಂದು ನಂಬಲಾಗಿದೆ. ಆದ್ದರಿಂದ ಈ ಹಬ್ಬವನ್ನು ಅನ್ನಕೂಟ ಅಥವಾ ಗೋವರ್ಧನ ಪೂಜೆ ಎಂದು ಕರೆಯುತ್ತಾರೆ.

ಪೌರಾಣಿಕ ಕಥೆಯ ಪ್ರಕಾರ, ಗೋಕುಳದ ಜನರು ವರ್ಷಾವರ್ಷ ಇಂದ್ರನಿಗೆ ಪೂಜೆ ಮಾಡುತ್ತಿದ್ದರು. ಆದರೆ ಶ್ರೀಕೃಷ್ಣನು ಅವರಿಗೆ “ಇಂದ್ರನ ಬದಲು ನಾವು ನಮಗೆ ಆಹಾರ, ಮೇವು, ಮಳೆ ಮತ್ತು ಜೀವ ನೀಡುವ ಗೋವರ್ಧನ ಪರ್ವತ ಹಾಗೂ ಗೋಮಾತೆಗೆ ಪೂಜೆ ಮಾಡಬೇಕು” ಎಂದು ತಿಳಿಸಿದನು. ಇಂದ್ರನು ಕೋಪದಿಂದ ಮಳೆಗಾಳಿ ಸುರಿಸಿದಾಗ, ಕೃಷ್ಣನು ತನ್ನ ಚಿಕ್ಕ ಬೆರಳಿನ ತುದಿಯಿಂದ ಗೋವರ್ಧನ ಪರ್ವತವನ್ನು ಎತ್ತಿ ಎಲ್ಲರಿಗೂ ಆಶ್ರಯ ನೀಡಿದನು.

ಈ ಘಟನೆಯು ಪ್ರಕೃತಿಪೂಜೆ, ಗೋವಿನ ಮಹಿಮೆ, ಮತ್ತು ಸಮಾಜದ ಏಕತೆಯ ಸಂದೇಶವನ್ನು ನೀಡುತ್ತದೆ. ಈ ದಿನದಲ್ಲಿ ಜನರು ಗೋಮಾತೆಗಳನ್ನು ಸ್ನಾನ ಮಾಡಿಸಿ, ಹೂವುಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಹಳ್ಳಿಗಳಲ್ಲಿ ಹಸುವಿನ ಗೋಮಯದಿಂದ ಗೋವರ್ಧನ ಪರ್ವತದ ಪ್ರತಿಮೆ ನಿರ್ಮಿಸಿ ಅದಕ್ಕೆ ನೈವೇದ್ಯ ಅರ್ಪಿಸುತ್ತಾರೆ. ಹಲವು ಊಟದ ಪದಾರ್ಥಗಳನ್ನು ತಯಾರಿಸಿ ಅನ್ನಕೂಟ ನಡೆಸಲಾಗುತ್ತದೆ.

ಗೋವರ್ಧನ ಪೂಜೆಯ ಪಾಠ:
ಈ ಹಬ್ಬವು ಪ್ರಕೃತಿ, ಪಶುಸಂರಕ್ಷಣೆ ಮತ್ತು ಪರಿಸರದ ಗೌರವವನ್ನು ಸಾರುತ್ತದೆ. ಮಾನವನು ತನ್ನ ಅಹಂಕಾರವನ್ನು ತೊರೆದು ದೇವರಲ್ಲಿ ನಂಬಿಕೆ ಇಟ್ಟು, ಪರಿಸರದ ರಕ್ಷಣೆಗಾಗಿ ಬದುಕಬೇಕು ಎಂಬುದೇ ಇದರ ಮುಖ್ಯ ಸಂದೇಶ.

“ಗೋವರ್ಧನ ಪರ್ವತದಂತೆ ನಾವೂ ಸಹ ಇತರರಿಗೆ ಆಶ್ರಯ, ಸಹಾಯ ನೀಡುವವರಾಗೋಣ”

-ನಿತ್ಯಾನಂದ ಕಾಮತ್, ಮೂಡುಬಿದಿರೆ

LEAVE A REPLY

Please enter your comment!
Please enter your name here