ಉಡುಪಿ: ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಕೈಗೊಳ್ಳಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ದವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಬಳಕೆ ಮಾಡಿಕೊಂಡು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ ವೈದ್ಯ ತಿಳಿಸಿದರು.
ಬುಧವಾರ ಮಲ್ಪೆಯ ಮೀನುಗಾರಿಕಾ ಬಂದರು ಆವರಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಮೀನುಗಾರಿಕೆ ಸೇರಿದಂತೆ ಅದಕ್ಕೆ ಪೂರಕವಾಗಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನನ್ನ ಕ್ಷೇತ್ರದ 20 ಸಾವಿರಕ್ಕೂ ಹೆಚ್ಚು ಜನ ಇಲ್ಲಿನ ಮೀನುಗಾರಿಕೆ ಅವಲಂಬಿಸಿದ್ದಾರೆ. ಮಲ್ಪೆಯು ದೇಶದಲ್ಲಿಯೇ ಅತಿ ಹೆಚ್ಚು ಮೀನು ಉತ್ಪಾದಿಸುವ ಬಂದರಾಗಿದೆ. ಕಳೆದ ಸಾಲುಗಳಲ್ಲಿ ಬಂದರುಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬಂದಿರುವ ಅನುದಾನ ಸಿ.ಆರ್.ಜೆಡ್ ನಿಯಮಾವಳಿಗಳಿಂದಾಗಿ ಬಳಕೆ ಮಾಡಿಕೊಳ್ಳಲು ಕಷ್ಟಸಾಧ್ಯವಾಗಿ ವಾಪಾಸು ಹೋಗಿದೆ. ಕೇಂದ್ರ ಸರ್ಕಾರ ಸಿ.ಆರ್.ಜೆಡ್. ನಿಯಮಾವಳಿಗಳನ್ನು ನೆರೆಯ ರಾಜ್ಯಗಳಾದ ಗೋವಾ ಮತ್ತು ಕೇರಳ ಮಾದರಿಯಲ್ಲಿ ರೂಪಿಸಿದರೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಒಂದೇ ರೀತಿಯ ನಿಯಮಾವಳಿಗಳು ಇರುವುದು ಒಳಿತು. ಹೀಗಾಗಿ ರಾಜ್ಯ ಸರ್ಕಾರ ದೇಶವ್ಯಾಪಿ ಏಕರೂಪದ ಸಿ.ಆರ್.ಜೆಡ್ ನ ನಿಯಮಾವಳಿಗಳನ್ನು ರೂಪಿಸಲು ಮನವಿ ಮಾಡಿದೆ. ಇದರಿಂದ ಮೀನುಗಾರಿಕೆ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದರು.
ಮತ್ಸ$ ಸಂಪದಾ ಯೋಜನೆಯು ಮೀನುಗಾರರಿಗೆ ಶಕ್ತಿ ತುಂಬಿದೆ. ಈ ಯೋಜನೆಯ ಅನುದಾನವು ಸಮರ್ಪಕವಾಗಿ ಬಳಕೆಯಾಗಬೇಕು. ಹೆಜಮಾಡಿ ಮೀನುಗಾರಿಕಾ ಬಂದರಿನ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿದಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಲಿದೆ. ಜಿಲ್ಲೆಯಲ್ಲಿ ಜಟ್ಟಿಗಳ ನಿಮಾರ್ಣ ಹಾಗೂ ಹೂಳೆತ್ತುವುದಕ್ಕೂ ಹೆಚ್ಚು ಗಮನ ನೀಡಬೇಕು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಮಲ್ಪೆಯು ಸರ್ವಋತು ಬಂದರಾಗಿದ್ದು ಹೆಚ್ಚು ಮೀನುಗಾರರು ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೀನುಗಾರಿಕಾ ದೋಣಿಗಳು ಹೆಚ್ಚಾದ ಕಾರಣ ಮೀನುಗಾರಿಕಾ ಬೋಟ್ಗಳ ನಿಲುಗಡೆಗೆ ವಿಸ್ತರಣೆ ಅಗತ್ಯವಿದೆ. ಇದರ ಜೊತೆಗೆ ಬಂದರಿನ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಸಿದ್ದಯ್ಯ ಡಿ., ಮೀನುಗಾರಿಕಾ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.