ಟೋಕಿಯೋ: ಜಪಾನ್‌ನ ಫುಕುಶಿಮಾ ಪ್ರಾಂತ್ಯದ ಹಳೆಯ ಮನೆಯೊಂದರಲ್ಲಿ ಅಚ್ಚರಿಯ ಜೀವಿ ಪತ್ತೆಯಾಗಿದೆ. ನೋಡುವುದಕ್ಕೆ ಅರ್ಧ ಮೀನು ಮತ್ತು ಅರ್ಧ ಮಾನವನ ಆಕೃತಿಯನ್ನು ಹೊಂದಿರುವ ಈ ಮಮ್ಮಿ ಈಗ ಹರಾಜಿಗೆ ಸಿದ್ಧವಾಗಿದೆ. ಜಪಾನಿನ ಜಾನಪದ ಕಥೆಗಳಲ್ಲಿ ಬರುವ ಕಪ್ಪಾ ಎಂಬ ಪೌರಾಣಿಕ ನೀರು ದೆವ್ವದ ಪ್ರತಿಕೃತಿ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಮಮ್ಮೀಕೃತ ಜೀವಿಯು ಅತ್ಯಂತ ಭಯಾನಕ ರೂಪವನ್ನು ಹೊಂದಿದೆ.
ಈ ಜೀವಿಗೆ ಮನುಷ್ಯನಂತೆಯೇ ಎರಡು ಬೃಹತ್ ಕೈಗಳು ಮತ್ತು ಹರಿತವಾದ ಉಗುರುಗಳಿವೆ. ಬಾಯಲ್ಲಿ ರೇಜರ್‌ನಷ್ಟು ಹರಿತವಾದ ಹಲ್ಲುಗಳಿದ್ದು, ನೋಡುವವರಿಗೆ ನಡುಕ ಹುಟ್ಟಿಸುವಂತಿದೆ. ದೇಹದ ಕೆಳಭಾಗವು ಮೀನಿನ ಬಾಲದಂತೆ ಕಿರಿದಾಗುತ್ತಾ ಸಾಗುತ್ತದೆ.
ಈ ಅಪರೂಪದ ಜಲಕನ್ಯೆಯನ್ನು ಈಗ ಹರಾಜಿಗಿಡಲಾಗಿದ್ದು, ಇದು ಸುಮಾರು 11,755 (ಅಂದಾಜು 14 ಲಕ್ಷ ರೂಪಾಯಿ) ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿದೆ. ಸಂಗ್ರಾಹಕರು ಮತ್ತು ಸಂಶೋಧಕರು ಈ ವಿಚಿತ್ರ ವಸ್ತುವನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಜಪಾನ್‌ನಲ್ಲಿ ಈ ಹಿಂದೆಯೂ ಇಂತಹ ಹಲವಾರು ಜಲಕನ್ಯೆ ಮಮ್ಮಿಗಳು ಪತ್ತೆಯಾಗಿದ್ದವು. ಆದರೆ, ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಇವುಗಳನ್ನು 18 ಅಥವಾ 19ನೇ ಶತಮಾನದಲ್ಲಿ ಮಂಗನ ಮೇಲ್ಭಾಗ ಮತ್ತು ಮೀನಿನ ಕೆಳಭಾಗವನ್ನು ಬಳಸಿ ತಯಾರಿಸಿದ ಕೃತಕ ಆಕೃತಿಗಳೆಂದು ಗುರುತಿಸಲಾಗಿದೆ. ಆ ಕಾಲದಲ್ಲಿ ಜಪಾನ್‌ನಿಂದ ಯುರೋಪ್ ದೇಶಗಳಿಗೆ ಇಂತಹ ವಿಲಕ್ಷಣ ವಸ್ತುಗಳನ್ನು ಪ್ರದರ್ಶನಕ್ಕಾಗಿ ರಫ್ತು ಮಾಡಲಾಗುತ್ತಿತ್ತು.
ಜಪಾನಿನ ಸಂಪ್ರದಾಯದ ಪ್ರಕಾರ, ಜಲಕನ್ಯೆಯ ಮಾಂಸವನ್ನು ತಿಂದವರು ಅಮರರಾಗುತ್ತಾರೆ ಎಂಬ ನಂಬಿಕೆಯಿದೆ. ಹಾಗೆಯೇ, ಇಂತಹ ಆಕೃತಿಗಳನ್ನು ರೋಗಗಳನ್ನು ತಡೆಗಟ್ಟಲು ಮತ್ತು ಅದೃಷ್ಟಕ್ಕಾಗಿ ಜನರು ಪೂಜಿಸುತ್ತಿದ್ದರು. ಫುಕುಶಿಮಾದಲ್ಲಿ ಪತ್ತೆಯಾಗಿರುವ ಈ ಮಮ್ಮಿಯು ಕೂಡ ಅಂತಹದ್ದೇ ಒಂದು ಧಾರ್ಮಿಕ ಅಥವಾ ಕಲಾತ್ಮಕ ಉದ್ದೇಶಕ್ಕಾಗಿ ತಯಾರಿಸಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

