ಮೂಡುಬದಿರೆ: ಪೋಸ್ಟ್ ಕಾರ್ಡ್ ನ್ಯೂಸ್ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ ಅವರ ಬಂಧನವನ್ನು ವಿರೋಧಿಸಿ ಮೂಡುಬಿದಿರೆ ಹನುಮಂತ ದೇವಸ್ಥಾನದಲ್ಲಿ ಭಾನುವಾರ ಸಂಜೆ ಹಿಂದೂ ಪ್ರಮುಖರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಬಳಿಕ ದೇವಸ್ಥಾನದಲ್ಲಿ ಕುಳಿತು ಸುಮಾರು ಅರ್ಧ ತಾಸು ರಾಮ ತಾರಕ ಮಂತ್ರ ಮತ್ತು ಹನುಮಾನ್ ಚಾಲೀಸವನ್ನು ಪಠಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಹಿಂದು ಪ್ರಮುಖರಾದ ಜಗದೀಶ್ ಅಧಿಕಾರಿ, ಸುದರ್ಶನ್ ಎಂ., ನಾಗರಾಜ ಪೂಜಾರಿ ಒಂಟಿಕಟ್ಟೆ, ಪ್ರಸಾದ್ ಕುಮಾರ್, ವಸಂತ ಗಿಳಿಯಾರ್, ವಿನಯ್ ಕುಮಾರ್,ರಮಿತ ಶೈಲೇಂದ್ರ ಕಾರ್ಕಳ, ಅಶ್ವತ್ಥ ಪಣಪಿಲ, ಪ್ರದೀಪ್ ಸರಿಪಳ್ಳ, ಅಭಿಲಾಷ್ ಅರ್ಜುನಾಪುರ, ಗೋಪಾಲ ಶೆಟ್ಟಿಗಾರ್ ಮತ್ತಿತರರ ಪ್ರಮುಖರು ಪಾಲ್ಗೊಂಡಿದ್ದರು.
ಸರಕಾರಿ ವಕೀಲರಿಂದ ಹೇಳಿಕೆ ದಾಖಲು: ಮದ್ದೂರು ಗಣೇಶೋತ್ಸವ ಗಲಭೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಫೊಟೊ ಬಳಸಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಆರೋಪದಲ್ಲಿ ಶುಕ್ರವಾರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಹೇಶ್ ವಿಕ್ರಮ್ ಹೆಗ್ಡೆ ಅವರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ಮೂಡುಬಿದಿರೆ ಕೋರ್ಟ್ನಲ್ಲಿ ನಡೆಯಲಿದ್ದು ಸರಕಾರಿ ವಕೀಲರು ಹೇಳಿಕೆ ದಾಖಲಿಸಿದ್ದಾರೆನ್ನಲಾಗಿದೆ. ವಿಕ್ರಮ್ ಹೆಗ್ಡೆ ಪರವಾಗಿ ವಕೀಲ ಶರತ್ ಶೆಟ್ಟಿ ವಾದಿಸಲಿದ್ದಾರೆ.