ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ಭೀಕರ ಅಪಘಾತ ಪ್ರಕರಣಕ್ಕೆ ವಿದ್ಯಾರ್ಥಿಗಳು ಸೇರಿ 9 ಜನರು ಸಾವನ್ನಪ್ಪಿದ್ದಾರೆ. ಭೀಕರ ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರು. ಮನೆಗೆ ಆಧಾರವಾಗಬೇಕಿದ್ದರುವ ಸಾವಿನ ಕದ ತಟ್ಟಿದ್ದಾರೆ. ಒಬ್ಬೊಬ್ಬರದು ಒಂದೊಂದು ಕಣ್ಣೀರ ಕಥೆಯಾಗಿದೆ. ಪೋಷಕರ ರೋದನ ಕರುಳು ಕಿವುಚುವಂತಿದೆ.
ಹಾಸನ: ಗಣೇಶ ಮೆರವಣಿಗೆ ವೇಳೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. 17ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತಕ್ಕೆ ಕ್ಯಾಂಟರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹೇಳಿದ್ದಾರೆ. ಇನ್ನು ಮೃತರ ಪೈಕಿ ಬಹುತೇಕರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಾವನ್ನಪ್ಪಿದವರ ವಿವರ
ಬಳ್ಳಾರಿ ನಿವಾಸಿ ಅಂತಿಮ ಬಿಇ ವಿದ್ಯಾರ್ಥಿ ಪ್ರವೀಣ್, ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿ ಕೆ.ಬಿ.ಪಾಳ್ಯ ನಿವಾಸಿ ರಾಜೇಶ್(17), ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ(17), ಮುತ್ತಿಗೆಹೀರಳ್ಳಿ ಗ್ರಾಮದ ನಿವಾಸಿ ಗೋಕುಲ್(17), ಕಬ್ಬಿನಹಳ್ಳಿ ನಿವಾಸಿಗಳಾದ ಕುಮಾರ(25), ಪ್ರವೀಣ(25), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗವಿ ಗಂಗಾಪುರ ಗ್ರಾಮ ನಿವಾಸಿ ಮಿಥುನ್(23), ಚಿಕ್ಕಮಗಳೂರು ಜಿಲ್ಲೆಯ ಮಾಣೇನಹಳ್ಳಿ ನಿವಾಸಿ ಬಿಇ ವಿದ್ಯಾರ್ಥಿ ಸುರೇಶ್ (19), ಹಾಸನ ತಾಲೂಕಿನ ಬಂಟರಹಳ್ಳಿ ಗ್ರಾಮದ ನಿವಾಸಿ ಪ್ರಭಾಕರ್ (55) ಮೃತ ದುರ್ದೈವಿಗಳು.
ಕ್ಯಾಂಟರ್ ಚಾಲಕನ ನಿರ್ಲಕ್ಷ್ಯವೇ ಕಾರಣ: IGP ಬೋರಲಿಂಗಯ್ಯ
ದುರಂತದ ಬಗ್ಗೆ ದಕ್ಷಿಣ ವಲಯ IGP ಬೋರಲಿಂಗಯ್ಯ ಹೇಳಿಕೆ ನೀಡಿದ್ದು, ಘಟನೆಯಲ್ಲಿ ಇಲ್ಲಿಯವರೆಗೆ 9 ಜನರು ಮೃತಪಟ್ಟಿದ್ದಾರೆ. ಈ ಪೈಕಿ 6 ಜನ ಸ್ಥಳೀಯರು ಮತ್ತು ಚಿಕ್ಕಮಗಳೂರು, ಬಳ್ಳಾರಿ, ಚಿತ್ರದುರ್ಗದ ಮೂವರು ವಿದ್ಯಾರ್ಥಿಗಳು. 17 ಜನರಿಗೆ ಗಾಯವಾಗಿದೆ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಗೊಂಡವರ ಕುರಿತು ಮಾಹಿತಿ ಪಡೆಯುತ್ತಿದ್ದೇವೆ ಎಂದಿದ್ದಾರೆ.
ಮೆರವಣಿಗೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗಿ
ಮೊಸಳೆ ಹೊಸಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಪಕ್ಕದಲ್ಲಿ ಗಣಪತಿ ಕೂರಿಸಲಾಗಿತ್ತು. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸದ್ಯ ಘಟನೆಯಲ್ಲಿ ಗಾಯಗೊಂಡ ಬಹುತೇಕರು ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಾಗಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಆಗಿದ್ದೇಗೆ?
ಶುಕ್ರವಾರದಂದು ಸರಿಯಾಗಿ 8ಗಂಟೆ 30 ನಿಮಿಷದ ಸುಮಾರಿಗೆ ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಗಣೇಶ ಮೆರವಣಿಗೆ ಹೊರಟಿತ್ತು. ಹೆದ್ದಾರಿಯ ಒಂದು ಬದಿ ಬಂದ್ ಮಾಡಿದ್ದರಿಂದ ಮತ್ತೊಂದು ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ವಾಹನಗಳು ನುಗ್ಗದಂತೆ ರಸ್ತೆ ಮಧ್ಯೆ ಬ್ಯಾರಿಕೇಡ್ಗಳನ್ನೂ ಹಾಕಲಾಗಿತ್ತು.
ಇದೇ ವೇಳೆಗೆ ಹಾಸನದಿಂದ ಹೊಳೆನರಸೀಪುರಕ್ಕೆ ಹೊರಟಿದ್ದ ಟ್ರಕ್, ಬೈಕ್ ಒಂದಕ್ಕೆ ಡಿಕ್ಕಿ ಹೊಡೆದು ಬಳಿಕ ಗಣೇಶ ಮೆರವಣಿಗೆಯತ್ತ ತಿರುಗಿತ್ತು. ಡಿಜೆ ಸದ್ದಿಗೆ ಕುಣೀತಿದ್ದವರಿಗೆ ಏನಾಗುತ್ತಿದೆ ಅಂತಾ ಗೊತ್ತಾಗುವಷ್ಟರಲ್ಲೇ ಟ್ರಕ್ ಮೈಮೇಲೆ ಎರಗಿತ್ತು.