ಕರಾವಳಿಯ ಸೋಮೇಶ್ವರ ಬೀಚ್‌ನ ವಿಶಿಷ್ಟತೆ ಮತ್ತು ಅಲ್ಲಿನ ಪ್ರವಾಸಿ ಆಕರ್ಷಣೆಗಳನ್ನು ಈ ಲೇಖನ ವಿವರಿಸುತ್ತದೆ. ಬೀಚ್‌ನ ಸ್ಥಳ, ಅಲ್ಲಿಗೆ ಹೋಗುವ ಮಾರ್ಗ, ಮತ್ತು ಪ್ರವಾಸಿಗರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ.
ಕನ್ನಡ ಸಿನಿಮಾಗಳು ಥಿಯೇಟರ್‌ಗಳಲ್ಲಿ ಅಬ್ಬರಿಸದೇ ಹಲವು ದಿನಗಳೇ ಆಗಿದ್ದವು. ಇದನ್ನು ನೀಗಿಸಿದ್ದು ಸು ಫ್ರಮ್ ಸೋ. ಇದರ ಪೂರ್ಣ ಹೆಸರು ಸುಲೋಚನಾ ಫ್ರಮ್ ಸೋಮೇಶ್ವರ. ರಾಜ್ ಬಿ. ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡ್ ನಿರ್ದೇಶನದ ಸಿನಿಮಾ ಅಬ್ಬರದ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿ ಎಲ್ಲರಿಗೂ ಗೊತ್ತಾಗಿರುವ ವಿಚಾರವೇನೆಂದರೆ ಅದು ಸೋಮೇಶ್ವರ.
ಸೋಮೇಶ್ವರ ಎಂದಾಗ ಕರಾವಳಿಗರಿಗೆ ನೆನಪಾಗುವುದು ಮಂಗಳೂರಿನಿಂದ 13 ಕಿಮೀ ದೂರದಲ್ಲಿರುವ ಸೋಮೇಶ್ವರ ಸೋಮನಾಥ ದೇವಸ್ಥಾನ. ಅದು ಬಿಟ್ಟರೆ ಬೈಂದೂರಿನಲ್ಲಿರುವ ಸೋಮೇಶ್ವರ ಬೀಚ್. ‘ಸೋಮೇಶ್ವರ ಬೀಚ್’ ಎಂಬ ಹೆಸರು ಶತಮಾನಗಳಷ್ಟು ಹಳೆಯದಾದ ಸಮುದ್ರ ತೀರದಲ್ಲಿರುವ ಭಗವಾನ್ ಸೋಮನಾಥನ ಹೆಸರಿನಿಂದಲೇ ಬಂದಿದೆ.
ಸೋಮೇಶ್ವರ ಬೀಚ್ ಅನ್ನು ಅತ್ಯಂತ ವಿಹಂಗಮ ಮಾಡಿಸುವುದು ಕರಾವಳಿಯ ಉದ್ದಕ್ಕೂ ಇರುವ ಭಾರೀ ಗಾತ್ರದ ಬಂಡೆಗಳು. ಈ ಬೀಚ್ ಪ್ರವಾಸಿಗರಲ್ಲಿ ಅಷ್ಟೊಂದು ಜನಪ್ರಿಯವಾಗಿಲ್ಲ. ರಸ್ತೆಯಿಂದ ಸಾಕಷ್ಟು ಒಳಭಾಗದಲ್ಲಿರುವುದು ಇದಕ್ಕೆ ಕಾರಣವೂ ಇರಬಹುದು. ಕರಾವಳಿಯಲ್ಲಿರುವ ಇತರ ಪ್ರಸಿದ್ಧ ಬೀಚ್‌ಗಳಿಗೆ ಹೋಲಿಸಿದರೆ ಸೋಮೇಶ್ವರ ಬೀಚ್‌ಗೆ ಹೋಗಲು ಒಂಚೂರು ಕಷ್ಟಪಡಬೇಕಾಗುತ್ತದೆ. ಅದರೊಂದಿಗೆ ಈ ಬೀಚ್‌ನಲ್ಲಿ ಸನಿಹದಲ್ಲಿ ಎಲ್ಲೂ ಹೋಟೆಲ್‌ಗಳಿಲ್ಲ. ಸಮುದ್ರದಲ್ಲಿ ಬಿದ್ದು ಹೊರಳಾಡಿದರೆ ಸಂಜೆಯ ಮೇಲೆ ಸ್ನಾಕ್ಸ್ ಸವಿಯಲು ಕೂಡ ಸ್ಥಳಗಳಿಲ್ಲದ ಕಾರಣ ಇದು ಹೆಚ್ಚಾಗಿ ಪ್ರಸಿದ್ದಿಯಾಗಿಲ್ಲ. ಈ ಬೀಚ್ ತಲುಪಲು, ನೀವು ಬೈಂದೂರು ಬಸ್ ನಿಲ್ದಾಣದಿಂದ ಸುಮಾರು 3.5 ಕಿ.ಮೀ ಪ್ರಯಾಣಿಸಬೇಕು. ಆ ದಿಕ್ಕಿನಲ್ಲಿ ಆಗಾಗ್ಗೆ ಖಾಸಗಿ ಬಸ್ಸುಗಳು ಓಡಾಡುವುದಿಲ್ಲ. ಟ್ಯಾಕ್ಸಿ ಅಥವಾ ಸ್ಥಳೀಯವಾಗಿ ಸಿಗುವ ಆಟೋ ಮೂಲಕ ಈ ಬೀಚ್‌ಗೆ ಎಂಟ್ರಿ ಕೊಡಬಹುದು. ಅಲ್ಲಿ ಸೋಮೇಶ್ವರನ ಒಂದು ಹಳೆಯ ದೇವಸ್ಥಾನವಿದೆ. ಅಲ್ಲಿಗೆ ಭೇಟಿ ನೀಡಬಹುದು. ಸಾಧ್ಯವಾದಲ್ಲಿ ಬೀಚ್‌ಗೆ ಹೋಗುವಾಗ ಗಾಳಿಪಟ ತೆಗೆದುಕೊಂಡು ಹೋಗಿ, ಬೀಚ್‌ನಲ್ಲಿ ಹಾರಿಸಲು ಟ್ರೈ ಮಾಡಿ. ನಿಮಗೆ ಖುಷಿಯಾಗದಿದ್ದರೆ ಹೇಳಿ.
ಆದರೆ, ಈ ಬೀಚ್ ಸ್ವಿಮ್ಮಿಂಗ್‌ಗೆ ಸೂಕ್ತವಲ್ಲ. ಅದಕ್ಕೆ ಕಾರಣ ಬಂಡೆಗಳು. ಅದಲ್ಲದೆ, ಬೀಚ್‌ನಲ್ಲಿ ನಾವುದೇ ಕೋಸ್ಟಲ್ ಗಾರ್ಡ್ ಕೂಡ ಇರೋದಿಲ್ಲ. ಬೆಟ್ಟದ ಮೇಲಿರುವ ಫಾರೆಸ್ಟ್ ಐಬಿಯಲ್ಲಿ ಅನುಮತಿ ಪಡೆದುಕೊಂಡು ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬಹುದು. ಫಾರೆಸ್ಟ್ ಐಬಿಯಿಂದ ಸೋಮೇಶ್ವರ ಬೀಚ್‌ಅನ್ನು ನೋಡುವುದೇ ದೊಡ್ಡ ಸಂಭ್ರಮ.