ಎಪಿಕೆ ವಂಚನೆಯ ಕುರಿತು ಎಚ್‌ಡಿಎಫ್‌ಸಿ ಬ್ಯಾಂಕ್‌ ನಿಂದ ಮುನ್ನೆಚ್ಚರಿಕೆ ಸಂದೇಶ

0
153

ಮುಂಬೈ: ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ಗ್ರಾಹಕರಿಗೆ ಎಪಿಕೆ (ಆಂಡ್ರಾಯ್ಡ್ ಪ್ಯಾಕೇಜ್ ಕಿಟ್) ವಂಚನೆಗಳ ವಿರುದ್ಧ ಎಚ್ಚರಿಕೆಯಿಂದ ಇರಲು ಸಲಹೆ ನೀಡಿದೆ. ಈ ವಂಚನೆಗಳ ಕುರಿತು ಜಾಗೃತಿ ಮೂಡಿಸಿ ಗ್ರಾಹಕರನ್ನು ರಕ್ಷಿಸುವ ಗುರಿಯನ್ನು ಬ್ಯಾಂಕ್ ಇಟ್ಟುಕೊಂಡಿದೆ.
ಎಪಿಕೆ ವಂಚನೆಯಲ್ಲಿ ವಂಚಕರು ಸಾಮಾನ್ಯವಾಗಿ ಬ್ಯಾಂಕ್ ಉದ್ಯೋಗಿಗಳು ಅಥವಾ ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿಕೊಂಡು ವಂಚನೆ ಮಾಡುವ ತಂತ್ರಗಳನ್ನು ಬಳಸುತ್ತಾರೆ. ಈ ವಂಚನೆಯಲ್ಲಿ ಮೊದಲಿಗೆ ವಿಶ್ವಾಸಾರ್ಹ ಮೂಲಗಳಿಂದ ಬಂದಂತೆ ತೋರುವ ಒಂದು ದುರುದ್ದೇಶಪೂರಿತ ಎಪಿಕೆ ಫೈಲ್ ಅನ್ನು ಸಂದೇಶ ರೂಪದಲ್ಲಿ ಕಳುಹಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಈ ಫೈಲ್‌ ಅನ್ನು ಇನ್‌ಸ್ಟಾಲ್ ಮಾಡಿದಾಗ, ವಂಚಕನಿಗೆ ಗ್ರಾಹಕರ ಫೋನ್‌ ನ ಸಂಪೂರ್ಣ ನಿಯಂತ್ರಣ ಸಿಗುತ್ತದೆ. ಆಗ ವಂಚಕನು ಕರೆಗಳು ಮತ್ತು ಪಠ್ಯ ಸಂದೇಶಗಳನ್ನು ಇನ್ನೊಂದು ಫೋನ್ ಗೆ ರೀಡೈರೆಕ್ಟ್ ಮಾಡಬಹುದು ಮತ್ತು ಬಾಧಿತರ ಫೋನ್‌ ನಿಂದ ಎಲ್ಲಾ ಡೇಟಾವನ್ನು ಕದಿಯಬಹುದು. ವಂಚಕರು ಆಗ ಬಾಧಿತರ ಬ್ಯಾಂಕ್ ಖಾತೆ(ಗಳನ್ನು) ಪ್ರವೇಶಿಸಿ ಅವರ ಸಮ್ಮತಿಯಿಲ್ಲದೆ ವಹಿವಾಟುಗಳನ್ನು ನಡೆಸಬಹುದು.
ಈ ವಂಚನೆ ಹೇಗೆ ನಡೆಯುತ್ತದೆ ಎಂಬ ವಿವರಗಳು ಈ ಕೆಳಗಿನಂತಿವೆ:

  1. ವಂಚಕರು ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಉದ್ಯೋಗಿಗಳು ಅಥವಾ ಜನಪ್ರಿಯ ಕಂಪನಿಗಳ ಉದ್ಯೋಗಿಗಳಂತೆ ತಮ್ಮನ್ನು ತಾವು ಬಿಂಬಿಸಿಕೊಂಡು ರೀ-ಕೆವೈಸಿ, ಟ್ರಾಫಿಕ್ ದಂಡದ ಪಾವತಿ, ಆದಾಯ ತೆರಿಗೆ ಮರುಪಾವತಿ ಇತ್ಯಾದಿಗಳ ನೆವದಲ್ಲಿ ಸಂದೇಶ ಕಳುಹಿಸುತ್ತಾರೆ. ಈ ಸಂದೇಶದಲ್ಲಿ ಒಂದು ನಕಲಿ ಎಪಿಕೆ ಲಿಂಕ್ ಇರುತ್ತದೆ.
  2. ಆ ಲಿಂಕ್ ಕ್ಲಿಕ್ ಮಾಡಿದಾಗ ಗ್ರಾಹಕರಿಗೆ ತಿಳಿಯದಂತೆ ಅವರ ಮೊಬೈಲ್ ಫೋನ್‌ ನಲ್ಲಿ ಮಾಲ್‌ವೇರ್ ಇನ್‌ಸ್ಟಾಲ್ ಆಗುತ್ತದೆ.
  3. ಈ ಮಾಲ್‌ವೇರ್ ಮೂಲಕ ವಂಚಕನಿಗೆ ವಂಚನೆಗೆ ಒಳಗಾದವರ ಫೋನ್‌ನ ಸಂಪೂರ್ಣ ಬಳಕೆ ಸಾಧ್ಯವಾಗುತ್ತದೆ.
  4. ಇದಾದ ಕೆಲವೇ ನಿಮಿಷಗಳಲ್ಲಿ, ಸಾಮಾನ್ಯವಾಗಿ ಅನೇಕ ಅನಧಿಕೃತ ವಹಿವಾಟುಗಳು ನಡೆಯುತ್ತವೆ, ಇದರಿಂದ ಗ್ರಾಹಕರಿಗೆ ಆರ್ಥಿಕ ನಷ್ಟವಾಗುತ್ತದೆ. ಬ್ಯಾಂಕ್‌ನಿಂದ ನಿಮ್ಮ ಖಾತೆಯಿಂದ ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಬಂದಾಗ ಬಾಧಿತನಿಗೆ ತಾನು ವಂಚನೆಗೊಳಗಾಗಿರುವುದು ತಿಳಿಯುತ್ತದೆ.
    ಕೆಲವು ಉದಾಹರಣೆಗಳು:
    • ವಂಚಕರು ಫೋನ್ ಕರೆ, ಇಮೇಲ್ ಅಥವಾ ಸಂದೇಶಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಿ, ಬ್ಯಾಂಕ್‌ನಿಂದ ಬಂದವರಂತೆ ಬಿಂಬಿಸಿಕೊಂಡು ಕೆವೈಸಿಯನ್ನು ತಕ್ಷಣ ನವೀಕರಿಸಬೇಕೆಂದು ಒತ್ತಾಯಿಸುತ್ತಾರೆ. ಇಲ್ಲದಿದ್ದರೆ ಖಾತೆಯನ್ನು ಬ್ಲಾಕ್ ಮಾಡುವ ಭಯವನ್ನು ಸೃಷ್ಟಿಸಿ ಒತ್ತಡ ಹೇರುತ್ತಾರೆ. ಆಗ ವಂಚಕರು ಬ್ಯಾಂಕ್ ಲೋಗೋ ಇರುವ ನಕಲಿ ಎಪಿಕೆ ಲಿಂಕ್‌ಗಳನ್ನು ಕಳುಹಿಸಿ, ಅದನ್ನು ಇನ್‌ಸ್ಟಾಲ್ ಮಾಡಲು ಕೇಳುತ್ತಾರೆ. ಇನ್‌ಸ್ಟಾಲ್ ಆದ ಬಳಿಕ, ಆ ಆಪ್ ಖಾತೆ ಸಂಖ್ಯೆ, ಕ್ರೆಡಿಟ್/ ಡೆಬಿಟ್ ಕಾರ್ಡ್ ಮಾಹಿತಿ ಅಥವಾ ಓಟಿಪಿಗಳಂತಹ ಸೂಕ್ಷ್ಮ ವಿವರಗಳನ್ನು ನಮೂದಿಸಲು ಪ್ರೇರೇಪಿಸುತ್ತದೆ. ವಂಚಕರು ಈ ಮಾಹಿತಿಗಳನ್ನು ತಕ್ಷಣ ಕದ್ದು ವಹಿವಾಟುಗಳನ್ನು ಮಾಡಿ ಆರ್ಥಿಕ ನಷ್ಟ ಉಂಟು ಮಾಡುತ್ತಾರೆ.
    • ವಂಚಕರು ಸಾರಿಗೆ ಪ್ರಾಧಿಕಾರ (ಆರ್‌ಟಿಓ) ಅಧಿಕಾರಿಗಳ ಎಂದು ಹೇಳಿಕೊಂಡು ಬಾಕಿಯಿರುವ ಇ-ಚಲನ್‌ಗೆ ಸಂಬಂಧಿಸಿದ ನಕಲಿ ಸಂದೇಶಗಳು ಮತ್ತು ಇಮೇಲ್‌ ಗಳನ್ನು ಕಳುಹಿಸುತ್ತಾರೆ. ಈ ಸಂದೇಶಗಳಲ್ಲಿ ದುರುದ್ದೇಶಪೂರಿತ ಎಪಿಕೆ ಲಿಂಕ್‌ಗಳಿರುತ್ತವೆ ಮತ್ತು ಅದನ್ನು ಕ್ಲಿಕ್ ಮಾಡಿದಾಗ ಬಾಧಿತರ ಫೋನ್ ನ ನಿಯಂತ್ರಣ ವಂಚಕರ ಕೈಗೆ ಹೋಗುತ್ತದೆ.
    ಎಪಿಕೆ ವಂಚನೆಯಿಂದ ರಕ್ಷಿಸಿಕೊಳ್ಳಲು ಕೆಲವು ಸಲಹೆಗಳು
    • ಆರ್‌ಟಿಓ, ಆದಾಯ ತೆರಿಗೆ ಇಲಾಖೆ ಅಥವಾ ಬ್ಯಾಂಕ್ ಅಧಿಕಾರಿಗಳಿಂದ ಬಂದಿರುವಂತೆ ತೋರುವ ಸಾಮಾಜಿಕ ಜಾಲತಾಣದಲ್ಲಿ, ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಬಂದ ಅನುಮಾನಾಸ್ಪದ ಲಿಂಕ್‌ ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಆಪ್‌ ಗಳನ್ನು/ ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ.
    • ನಿಮ್ಮ ಫೋನ್ ನಲ್ಲಿ ಅಥವಾ ಸಾಧನದಲ್ಲಿ ವಿಶ್ವಾಸಾರ್ಹ ಆಂಟಿವೈರಸ್ ಅಥವಾ ಆಂಟಿ-ಮಾಲ್‌ವೇರ್ ಸಾಫ್ಟ್‌ ವೇರ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಸಾಫ್ಟ್ ವೇರ್ ಗಳು ಹಾನಿಕಾರಕ ಫೈಲ್‌ಗಳನ್ನು ಪತ್ತೆ ಮಾಡಿ ತಡೆಯಬಹುದು.
    • ಅಪರಿಚಿತ ವ್ಯಕ್ತಿಯಿಂದ ಬಂದ ಥರ್ಡ್- ಪಾರ್ಟಿ ಆಪ್‌ ಗಳನ್ನು ಡೌನ್‌ಲೋಡ್ ಮಾಡಬೇಡಿ. ಆಪ್‌ ಗಳನ್ನು ಕೇವಲ ವಿಶ್ವಾಸಾರ್ಹ ಮೂಲಗಳಿಂದ ಅಥವಾ ಅಧಿಕೃತ ವೆಬ್‌ಸೈಟ್‌ಗಳಿಂದ ಮಾತ್ರ ಡೌನ್‌ಲೋಡ್ ಮಾಡಿ.
    • ಸಂದೇಶ/ ಇಮೇಲ್‌ಗಳ ಅಧಿಕೃತತೆಯಮ್ಮು ಸಂಬಂಧಿತ ಅಧಿಕೃತ ವೆಬ್‌ಸೈಟ್ ಮೂಲಕ ಪರಿಶೀಲಿಸಿ.
    • ವಂಚನಾತ್ಮಕ/ಅನುಮಾನಾಸ್ಪದ ಕರೆಗಳು, ಸಂದೇಶಗಳ ಕುರಿತು https://sancharsaathi.gov.in/ ಅಥವಾ ಸಂಚಾರ ಸಾಥಿ ಮೊಬೈಲ್ ಆಪ್ ಮೂಲಕ ದೂರು ಕೊಡಿ.
    ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ “ಡಿಜಿಟಲ್ ಅರೆಸ್ಟ್” ನಂತಹ ವಂಚನೆ ವಿರುದ್ಧವೂ ಎಚ್ಚರಿಕೆಯಿಂದಿರಲು ಸೂಚಿಸುತ್ತದೆ. ಈ ವಂಚನೆ ಪ್ರಕರಣಗಳಲ್ಲಿ ವಂಚಕರು ಕಾನೂನು ಜಾರಿ ಅಥವಾ ಸರ್ಕಾರಿ ಅಧಿಕಾರಿಗಳಂತೆ ತೋರಿಸಿಕೊಂಡು ತೆರಿಗೆ ವಂಚನೆ, ಕಾನೂನು ಉಲ್ಲಂಘನೆಗಳು, ಆರ್ಥಿಕ ಹಗರಣ ಇತ್ಯಾದಿ ಕಾರಣಗಳನ್ನು ಇಟ್ಟುಕೊಂಡು ಡಿಜಿಟಲ್ ಅರೆಸ್ಟ್ ವಾರಂಟ್‌ ಎಂದು ಬೆದರಿಸುತ್ತಾರೆ. ಸಾಮಾನ್ಯ ವಂಚನೆಗಳಲ್ಲಿ ಹೂಡಿಕೆ ವಂಚನೆಗಳು ಸೇರಿದ್ದು, ಇದರಲ್ಲಿ ವಂಚಕರು ಸ್ಟಾಕ್‌ಗಳು, ಐಪಿಓಗಳು, ಕ್ರಿಪ್ಟೋಕರೆನ್ಸಿ ಇತ್ಯಾದಿಗಳಲ್ಲಿ ಹೆಚ್ಚಿನ ಲಾಭವನ್ನು ಒದಗಿಸುವ ಭರವಸೆ ನೀಡುತ್ತಾರೆ. ನಕಲಿ ಸ್ವಯಂಚಾಲಿತ ಹೂಡಿಕೆ ವೇದಿಕೆಗಳ ಮೂಲಕ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈ ಸುಳ್ಳು ಭರವಸೆ ನೀಡಲಾಗುತ್ತದೆ. ವಂಚಕರು ಬಾಧಿತರ ಭಾವನೆಗಳನ್ನು ಗುರಿಯಾಗಿಟ್ಟುಕೊಂಡು ಆಸೆ, ಭಯ ಮತ್ತು ಸಹಾಯದ ತಂತ್ರವನ್ನು ಬಳಸಿಕೊಂಡು ವಂಚನೆಯನ್ನು ಮಾಡುತ್ತಾರೆ.
    ಆನ್‌ಲೈನ್ ವಂಚನೆಗೆ ಒಳಗಾದ ಸಂದರ್ಭದಲ್ಲಿ, ಬಾಧಿತರು ತಕ್ಷಣವೇ ಅನಧಿಕೃತ ವಹಿವಾಟುಗಳ ಕುರಿತು ಬ್ಯಾಂಕ್‌ ಗೆ ದೂರು ನೀಡಿ, ಕಾರ್ಡ್‌ಗಳು/ ಯುಪಿಐ/ ನೆಟ್ ಬ್ಯಾಂಕಿಂಗ್‌ನಂತಹ ಪಾವತಿ ವ್ಯವಸ್ಥೆಗಳನ್ನು ಬ್ಲಾಕ್ ಮಾಡಲು ಕ್ರಮ ಕೈಗೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ನಷ್ಟಗಳನ್ನು ತಡೆಯಬಹುದು. ಗ್ರಾಹಕರು ಗೃಹ ಸಚಿವಾಲಯ (ಎಂಎಚ್ಎ) ಪ್ರಾರಂಭಿಸಿರುವ 1930 ಎಂಬ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬೇಕು ಮತ್ತು ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ ನಲ್ಲಿ https://www.cybercrime.gov.in ದೂರು ಸಲ್ಲಿಸಬೇಕು.
    ಎಚ್‌ಡಿಎಫ್‌ಸಿ ಬ್ಯಾಂಕ್ ಕುರಿತು
    ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: www.hdfcbank.com

LEAVE A REPLY

Please enter your comment!
Please enter your name here