ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸಾಹಿತಿ ಹಾಗೂ ಕಲಾವಿದೆ ಪೂರ್ಣಿಮಾ ಸುರೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪುಸ್ತಕಗಳನ್ನು ಓದುವುದರ ಮುಖಾಂತರ ಸಾಹಿತ್ಯದ ಆಸಕ್ತಿ ಬೆಳೆಯುತ್ತದೆ. ಕಥೆಯನ್ನು ನಾವು ಕಟ್ಟುವುದು , ಕವಿತೆ ನಮ್ಮೊಳಗೆ ಹುಟ್ಟುವುದು. ಕಥೆಯಲ್ಲಿ ನಮ್ಮ ಮುಂದೆ ಕಂಡ ಘಟನೆಗಳಿಗೆ ಬಣ್ಣನೆಗಳನ್ನು ನೀಡಿ ರಚಿಸುವುದಾದರೆ , ಕವಿತೆಗಳು ನಮ್ಮ ಮನಸ್ಸಿನ ಒಳಗಡೆ ಇರುವ ಭಾವನೆಗಳನ್ನು ಅತಿ ಕಡಿಮೆ ಶಬ್ದಗಳಲ್ಲಿ ಅತಿ ಹೆಚ್ಚು ಅರ್ಥ ನೀಡುವಂತೆ ರಚಿಸುವುದಾಗಿದೆ . ವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮೃತ ಭಾರತಿ ಟ್ರಸ್ಟ್ ನ ವಿಶ್ವಸ್ತರು ಹಾಗೂ ಹಾಸ್ಟೆಲ್ ಕಮಿಟಿಯ ಗೌರವಾಧ್ಯಕ್ಷರು ಹೆಚ್. ಯೋಗೀಶ್ ಭಟ್ ಅವರು ಮಾತನಾಡಿ, ಜೀವನದಲ್ಲಿ ಕನಸುಗಳು ಬಹಳ ಮುಖ್ಯ ನಾವು ಕನಸು ಕಂಡಾಗ ಭಾವನೆಗಳು ಹುಟ್ಟಿಕೊಳ್ಳುತ್ತವೆ ನಮ್ಮಲ್ಲಿ ಭಾವನೆಗಳು ಹುಟ್ಟಿಕೊಳ್ಳದಿದ್ದಾಗ ನಾವು ನಿಂತ ನೀರಾಗುತ್ತೇವೆ. ಅಂಕಗಳ ಜೊತೆ ಹವ್ಯಾಸವಾಗಿ ನಾವು ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅದು ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ ಎಂದರು. ಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ್ ಶೆಟ್ಟಿ , ಕವಿತೆ ಗಳನ್ನು ವಾಚಿಸುವ ವಿದ್ಯಾರ್ಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಾನ್ವಿ , ವೈಷ್ಣವಿ ಶೇರಿಗಾರ್ , ಸಿದ್ದಮ್ಮ , ವಿಶ್ವನಾಥ್, ಕಾರ್ತಿಕಾ, ಕಾವ್ಯ ಸಿ. ಶೆಟ್ಟಿ, ಸಮೀಕ್ಷಾ ಮತ್ತು ಸಾಕ್ಷಿ ಪೂಜಾರಿ ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ಸಾಹಿತ್ಯ ಸಂಘದ ಮಾರ್ಗದರ್ಶಕರಾದ ವೀಣೇಶ್ ಅಮೀನ್ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ಸುಕನ್ಯಶ್ರೀ ಸ್ವಾಗತಿಸಿ, ಸಂಧ್ಯಾ ವಂದಿಸಿದರು. ಅನುಷಾ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.

