ಅರ್ಹರಿಗೆ ಇನ್ನಷ್ಟು ಪ್ರಯೋಜನ ಸಿಗುವಂತೆ ಮಾಡಿ : ಶಂಕರ ಸೇರಿಗಾರ್
ಹೆಬ್ರಿ : ಹೆಬ್ರಿ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆಯು ಅಧ್ಯಕ್ಷ ಶಂಕರ ಸೇರಿಗಾರ್ ಅಧ್ಯಕ್ಷತೆಯಲ್ಲಿ ಸಮಾಜ ಮಂದಿರದಲ್ಲಿ ಬುಧವಾರ ನಡೆಯಿತು .
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಾಗಿ ಜನರಿಂದ ಅರ್ಜಿಗಳು ಬಂದರೆ ಶೀಘ್ರವಾಗಿ ಪರಿಶೀಲನೆ ನಡೆಸಿ ಹೆಚ್ಚಿನ ಜನರಿಗೆ ಗ್ಯಾರಂಟಿ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಬೇಕು ಎಂದು ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಸೇರಿಗಾರ್ ಹೇಳಿದರು.

ಅವರು ಬುಧವಾರ ಸಮಾಜಮಂದಿರದಲ್ಲಿ ಹೆಬ್ರಿ ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಬ್ರಿ ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯದರ್ಶಿಯಾಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಯೋಜನೆಗೆ ಹೊಸ ಅರ್ಜಿಗಳು ಬಂದರೆ ಸಕಾಲದಲ್ಲಿ ಇತ್ಯರ್ಥ ಮಾಡಿ ಯೋಜನೆಯನ್ನು ಜನತೆಗೆ ತಲುಪಿಸಿ ಎಂದು ಸೂಚಿಸಿದರು.
21 ಮಂದಿ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ನೀಡಲಾಗಿದೆ ಎಂದು ಆಹಾರ ನಿರೀಕ್ಷಕ ಗುರುಪ್ರಸಾದ್ ತಿಳಿಸಿದರು. ಮೆಸ್ಕಾಂ ಹೆಬ್ರಿ ಉಪ ವಿಭಾಗದ ವ್ಯಾಪ್ತಿಯಲ್ಲಿ ೧೪೪೩೭ ಫಲಾನುಭವಿಗಳು ೮೦ ಲಕ್ಷ ರೂಪಾಯಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಮೆಸ್ಕಾಂ ಎಇಇ ನಾಗರಾಜ್ ಮಾಹಿತಿ ನೀಡಿದರು.
ಹೆಬ್ರಿ ಕಾರ್ಕಳ, ಹೆಬ್ರಿ ಕಬ್ಬಿನಾಲೆ ಮುನಿಯಾಲು ಶಿರ್ಲಾಲು ಕಾರ್ಕಳ ಮತ್ತು ಹೆಬ್ರಿಮಡಾಮಕ್ಕಿ ಸಿದ್ಧಾಪುರ ಅಮಾಸೆಬೈಲು ಮಾರ್ಗದಲ್ಲಿ ಶೀಘ್ರವಾಗಿ ಸರ್ಕಾರಿ ಬಸ್ ಓಡಿಸುವ ಪ್ರಸ್ತಾವನೆಯನ್ನು ಮಂಜೂರುಗೊಳಿಸುವಂತೆ ಸಮಿತಿಯ ಸದಸ್ಯರು ಹಾಗೂ ಅಧ್ಯಕ್ಷ ಶಂಕರ ಸೇರಿಗಾರ್ ಮನವಿ ಮಾಡಿದರು. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ತಿಂಗಳಿನಲ್ಲಿ ಒಮ್ಮೆ ಕುಚ್ಚಿಗೆ ಮತ್ತೊಮ್ಮೆ ಬೆಳ್ತಿಗೆ ಅಕ್ಕಿಯನ್ನು ರೊಟೇಷನ್ ಮಾದರಿಯನ್ನು ವಿತರಿಸಬೇಕು. ಇದರಿಂದ ಜನತೆಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು. ಸದಸ್ಯರ ಅಭಿಪ್ರಾಯವನ್ನು ಸರ್ಕಾರ ಮತ್ತು ಆಹಾರ ಇಲಾಖೆಗೆ ತಲುಪಿಸುವಂತೆ ಅಧ್ಯಕ್ಷ ಶಂಕರ ಸೇರಿಗಾರ್ ಸೂಚಿಸಿದರು.
ಪಂಚಾಯಿತಿರಾಜ್ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಇ.ಡಿ, ಆಹಾರ ನಿರೀಕ್ಷಕ ಗುರುಪ್ರಸಾದ್, ಹೆಬ್ರಿ ಮೆಸ್ಕಾಂ ಎಇಇ ನಾಗರಾಜ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವೀಚಾರಕಿ ರೇವತಿ, ಕೆಎಸ್ ಆರ್ ಟಿಸಿಯ ಭೋಜ ಕಾರ್ಕಳ, ಹೆಬ್ರಿ ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಸಾವಿತ್ರಿ ನಾಯ್ಕ್, ಶಶಿಕಲಾ ಆರ್ ಪಿ, ರಘುನಾಥ ಪೂಜಾರಿ, ವಸಂತ ಪೂಜಾರಿ, ರಾಜು ಪೂಜಾರಿ, ಜಗದೀಶ ಹೇರಳೆ, ತಾಲ್ಲೂಕು ಪಂಚಾಯಿತಿಯ ಲತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ದಿನೇಶ್ ಇ. ಡಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

