ಹೆಬ್ರಿ : ಮಂಡಾಡಿಜೆಡ್ಡು ಎಂಬಲ್ಲಿ ಗ್ಯಾಸ್ ಲೀಕೆಜ್ ಆಗಿ ಬೆಂಕಿ ತಗುಲಿ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ತಿರುವು ಲಭಿಸಿದೆ. ಮೃತಪಟ್ಟ ಅನೂಪ್ ನಾಯಕ್ ಅವರ ಪತ್ನಿ ರೇಷ್ಮಾ ಅವರು ಗ್ಯಾಸ್ ರಿಫಿಲ್ಲಿಂಗ್ ಸಂದರ್ಭ ಬೆಂಕಿ ತಗುಲಿ ಗಂಡ ಸಾವನ್ನಪ್ಪಿದ್ದು ಇದಕ್ಕೆ ಅತ್ತೆ -ಮಾವನೇ ಕಾರಣ ಎಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಪ್ರಕರಣ ಎಪ್ರಿಲ್ 11ರಂದು ಗ್ಯಾಸ್ ಲೀಕೆಜ್‌ನಿಂದಾಗಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಂಭೀರ ಸುಟ್ಟಗಾಯಗಳೊಂದಿಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅನೂಪ್ ಎ. 17ರಂದು ಮೃತಪಟ್ಟಿದ್ದರು. ಮನೆಯಲ್ಲಿ ಅಕ್ರಮವಾಗಿ ಗೃಹ ಬಳಕೆಯ ಸಿಲಿಂಡರಿನ ಗ್ಯಾಸನ್ನು ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ರಿಫಿಲ್ಲಿಂಗ್ ಮಾಡುವಾಗ ಅನೂಪ್ ಅವರ ತಾಯಿ ಆಶಾ ಬೇಜವಾಬ್ದಾರಿಯಿಂದ ಲೈಟರ್ ಉರಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಹತ್ತಿರದಲ್ಲಿದ್ದ ಅನೂಪ್‌ಗೆ ಗಂಭೀರ ಸುಟ್ಟಗಾಯವಾಗಿ ಮೃತಪಟ್ಟಿರುತ್ತಾರೆ.
ನನ್ನ ಮತ್ತು ಪತಿಯ ವಿರೋಧದ ನಡುವೆಯೂ ಮಾವ ಮತ್ತು ಅತ್ತೆ ಗೃಹ ಬಳಕೆಯ ಅಡುಗೆ ಅನಿಲ ಜಾಡಿಗಳನ್ನು ಅಪಾಯಕಾರಿ ರೀತಿಯಲ್ಲಿ ಮನೆಯಲ್ಲಿ ಸಂಗ್ರಹಿಸಿ ವಾಣಿಜ್ಯ ಬಳಕೆಯ ಜಾಡಿಗಳಿಗೆ ವರ್ಗಾವಣೆ ಮಾಡುತ್ತಿದ್ದರು. ಆಗ ಅತ್ತೆಯು ಬೇಜವಾಬ್ದಾರಿಯಿಂದ ಲೈಟರ್ ಉಪಯೋಗಿಸಿದ್ದರಿಂದ ಬೆಂಕಿ ಹತ್ತಿಕೊಂಡು ಅಲ್ಲೇ ಇದ್ದ ನನ್ನ ಪತಿಗೆ ಬೆಂಕಿ ತಗುಲಿ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಲ್ಲದೆ ಗ್ಯಾಸ್ ರಿಫಿಲ್ಲಿಂಗ್ ವೇಳೆ ಬೆಂಕಿ ತಗುಲಿರುವ ವಿಷಯವನ್ನು ಮುಚ್ಚಿ ಹಾಕುವ ಸಲುವಾಗಿ ಸಿಲಿಂಡರ್ ಸ್ಫೋಟದ ಸ್ಥಳವನ್ನು ಸ್ವಚ್ಛಗೊಳಿಸಿ ಸಾಕ್ಷ್ಯನಾಶ ಮಾಡಿದ್ದಾರೆ. ನನ್ನ ಪತಿಯ ಸಾವಿಗೆ ಅನೂಪ್ ಅವರ ತಂದೆ ಅನಂತ ನಾಯಕ್ ಹಾಗೂ ತಾಯಿ ಆಶಾ ಅವರೇ ಕಾರಣವೆಂದು ರೇಷ್ಮಾ ದೂರಿನಲ್ಲಿ ದಾಖಲಿಸಿದ್ದಾರೆ. ಅನೂಪ್ – ರೇಷ್ಮಾ ದಂಪತಿಗೆ 4 ವರ್ಷದ ಮಗನಿದ್ದಾನೆ.