ಬೆಂಗಳೂರು – ಕೋಕಾ-ಕೋಲಾ ಕಂಪನಿಯು ಇಂದು ಹಲವಾರು ಕಂಪನಿಗಳು ಮತ್ತು ಉದ್ಯಮಗಳಲ್ಲಿ ಅನುಭವ ಹೊಂದಿರುವ ಅನುಭವಿ ಬಿಸಿನೆಸ್ ಲೀಡರ್ ಹೇಮಂತ್ ರೂಪಾನಿಯವರನ್ನು ಬೆಂಗಳೂರಿನಲ್ಲಿ ನೆಲೆಗೊಂಡಿರುವ ತಮ್ಮ ಬಾಟಲಿಂಗ್ ಕಂಪನಿಯಾದ ಹಿಂದುಸ್ತಾನ್ ಕೋಕಾ-ಕೋಲಾ ಬಿವರೇಜಸ್ ಪ್ರೈವೇಟ್ ಲಿಮಿಟೆಡ್ (ಹೆಚ್‌ಸಿಸಿಬಿ)ಗೆ ಸಿಇಓ ಆಗಿ ನೇಮಿಸಿರುವುದಾಗಿ ಘೋಷಿಸಿದೆ. ಅವರು ಸೆಪ್ಟೆಂಬರ್ 8 ರಿಂದ ಜಾರಿಗೆ ಬರುವಂತೆ ಕಾರ್ಯಾರಂಭ ಮಾಡಲಿದ್ದಾರೆ.
ಹೇಮಂತ್ ರೂಪಾನಿಯವರು ಮಾಂಡೆಲೆಜ್ ಇಂಟರ್ ನ್ಯಾಷನಲ್ ಇಂಕ್. ಸಂಸ್ಥೆಯಲ್ಲಿ ಒಂಬತ್ತು ವರ್ಷಗಳ ಕಾಲ ಕೆಲಸದ ಮಾಡಿದ ಅನುಭವ ಹೊಂದಿದ ನಂತರ ಹೆಚ್‌ಸಿಸಿಬಿಗೆ ಬರುತ್ತಿದ್ದಾರೆ. ಹೇಮಂತ್ ಅವರು ಈ ಹಿಂದೆ ಇಂಡೋನೇಷಿಯಾ, ಫಿಲಿಪೈನ್ಸ್, ವಿಯೆಟ್ನಾಂ, ಮಲೇಷಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್ ಒಳಗೊಂಡಿರುವ ಮಾಂಡಲೆಜ್ ನ ಆಗ್ನೇಯ ಏಷ್ಯಾದ ವ್ಯಾಪಾರ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಹೇಮಂತ್ ಅವರು ಪ್ರಸ್ತುತ ಹೆಚ್‌ಸಿಸಿಬಿ ಸಿಇಓ ಆಗಿರುವ ಜುವಾನ್ ಪಾಬ್ಲೊ ರೊಡ್ರಿಗಸ್ ಅವರ ಸ್ಥಾನವನ್ನು ತುಂಬಲಿದ್ದಾರೆ. ರೊಡ್ರಿಗಸ್ ಅವರು ಕೋಕಾ-ಕೋಲಾ ವ್ಯವಸ್ಥೆಯಲ್ಲಿಯೇ ಹೊಸ ಅವಕಾಶವನ್ನು ಸ್ವೀಕರಿಸಲಿದ್ದಾರೆ.
ಹೇಮಂತ್ ಅವರು ಹೆಚ್‌ಸಿಸಿಬಿಯ ನಿರ್ದೇಶಕರ ಮಂಡಳಿಗೆ ರಿಪೋರ್ಟ್ ಮಾಡಲಿದ್ದಾರೆ.
ಹೇಮಂತ್ ಅವರು ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡಿದ, ವಾಣಿಜ್ಯ ಯಶಸ್ಸನ್ನು ಸಾಧಿಸಿರುವ ಅತ್ಯಂತ ಸಾಧನೆಗೈದ ಬಿಸಿನೆಸ್ ಲೀಡರ್ ಆಗಿದ್ದಾರೆ. ಅವರಿಗೆ ಭಾರತೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ದುಡಿದ ಅನುಭವವಿದೆ. ಹೆಚ್‌ಸಿಸಿಬಿ ಕಂಪನಿಯು ಭಾರತದಲ್ಲಿ ಮಾಡಿರುವ ದೊಡ್ಡ ಹೂಡಿಕೆಯನ್ನು ಯಶಸ್ವಿಗೊಳಿಸಲು ಅವರು ಸಹಾಯ ಮಾಡಲಿದ್ದಾರೆ ಎಂದು ಕಂಪನಿಯು ಭಾವಿಸಿದೆ.
ಭಾರತದವರಾದ ಹೇಮಂತ್ ಅವರು 2016ರಲ್ಲಿ ಮಾಂಡೆಲೆಜ್ ಗೆ ಭಾರತ ವಿಭಾಗದ ಮಾರಾಟ ನಿರ್ದೇಶಕರಾಗಿ ಸೇರಿದರು. ನಂತರ, ವಿಯೆಟ್ನಾಂನಲ್ಲಿ ವೈಸ್ ಪ್ರೆಸಿಡೆಂಟ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು. 2022ರಲ್ಲಿ ಅವರು ಆಗ್ನೇಯ ಏಷ್ಯಾದ ವ್ಯಾಪಾರ ಘಟಕದ ಅಧ್ಯಕ್ಷರಾಗಿ ಬಡ್ತಿ ಪಡೆದರು.
ಹೇಮಂತ್ ಅವರು ತಮ್ಮ ವೃತ್ತಿಜೀವನವನ್ನು 1997ರಲ್ಲಿ ಐಸಿಐ ಇಂಡಿಯಾ ಲಿಮಿಟೆಡ್ ಎಂಬ ಪೇಂಟ್ ಕಂಪನಿಯಲ್ಲಿ ಪ್ರಾರಂಭಿಸಿದರು. 1999ರಲ್ಲಿ ಭಾರತದಲ್ಲಿ ಪೆಪ್ಸಿಕೋಗೆ ಸೇರಿದರು ಮತ್ತು 2002ರಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ಗೆ ತೆರಳಿದರು. 2004ರಲ್ಲಿ ಮತ್ತೆ ಪೆಪ್ಸಿಕೋಗೆ ಮರಳಿದ ಅವರು ಆರು ವರ್ಷಗಳ ಕಾಲ ಕೆಲಸ ಮಾಡಿದರು. ಅವರು ಅಲ್ಲಿ ಹಲವಾರು ಜವಾಬ್ದಾರಿಯುತ ಉನ್ನತ ಹುದ್ದೆಗಳನ್ನು ನಿರ್ವಹಿಸಿದರು, ಕೊನೆಗೆ ಭಾರತದ ಬಿವರೇಜಸ್ ವಿಭಾಗದ ಕಸ್ಟಮರ್ ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷರಾದರು.
2010ರಲ್ಲಿ, ಹೇಮಂತ್ ಅವರು ವೊಡಾಫೋನ್ ಸಂಸ್ಥೆಯನ್ನು ಸೇರಿದರು ಮತ್ತು 2014ರಲ್ಲಿ ಆಹಾರ ಕಂಪನಿಯಾದ ಬ್ರಿಟಾನಿಯಾ ಇಂಡಸ್ಟ್ರೀಸ್ ಗೆ ಮಾರಾಟ ಮತ್ತು ಬ್ರೆಡ್ ವಿಭಾಗದ ವ್ಯಾಪಾರ ಮುಖ್ಯಸ್ಥರಾಗಿ ಸೇರಿದರು.
ಹೇಮಂತ್ ಅವರು ಜೈಪುರ್ ನ ರೀಜನಲ್ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಮತ್ತು ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ನಿಂದ ಮಾರ್ಕೆಟಿಂಗ್ ನಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ.
ಹೆಚ್‌ಸಿಸಿಬಿ ಭಾರತದಲ್ಲಿನ ಕೋಕಾ-ಕೋಲಾದ ಅತಿದೊಡ್ಡ ಬಾಟಲಿಂಗ್ ಕಂಪನಿಯಾಗಿದೆ. 2024ರ ಡಿಸೆಂಬರ್ ನಲ್ಲಿ ಕೋಕಾ-ಕೋಲಾ ಕಂಪನಿಯು ಹೆಚ್‌ಸಿಸಿಬಿಯ ಮಾತೃ ಸಂಸ್ಥೆಯಾದ ಹಿಂದುಸ್ತಾನ್ ಕೋಕಾ-ಕೋಲಾ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ನ ಶೇ.40ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಜುಬಿಲಂಟ್ ಭಾರತಿಯಾ ಗ್ರೂಪ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ.

