ರಾ .ಹೆ.169 : ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಹೆದ್ದಾರಿ ಇಲಾಖೆ

0
149

ಸಾಣೂರು ಬೈಪಾಸ್ ಸರ್ಕಲ್ ಸುತ್ತ ಡಾಮರೀಕರಣ ಆರಂಭ, ಸೋಲಾರ್ ಬ್ಲಿಂಕರ್ ಅಳವಡಿಕೆ, ತಾತ್ಕಾಲಿಕ ಚರಂಡಿ ವ್ಯವಸ್ಥೆ

ಕಳೆದ ಮೂರು ತಿಂಗಳಿನಿಂದ ನಿರಂತರ ಸುರಿಯುತ್ತಿರುವ ಮಳೆಗೆ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್ ನ ಸುತ್ತ ಡಾಮರೀಕೃತ ರಸ್ತೆಯ ಮೇಲ್ಮೈ ಸಂಪೂರ್ಣ ಕಿತ್ತು ಹೋಗಿ ಗುಂಡಿಗಳಾಗಿತ್ತು .

ಮಳೆ ನೀರು ನಿಂತು ಹಲವಾರು ವಾಹನಗಳು ಮತ್ತು ಪ್ರಯಾಣಿಕರು ಅಪಘಾತಕ್ಕೆ ಒಳಗಾಗಿ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಇಲಾಖೆಯನ್ನು ಶಪಿಸುವಂತಾಗಿತ್ತು.

ಕಳೆದ ಮಂಗಳವಾರ ಈ ಬಗ್ಗೆ ಉಡುಪಿ ಸಂಸದರಿಗೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಪರಿಸ್ಥಿತಿಯ ಗಂಭೀರತೆಯನ್ನು ಅವರಿಗೆ ಅರ್ಥ ಮಾಡಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ನವ ದೆಹಲಿಯಲ್ಲಿದ್ದ ಸಂಸದರು ಕೂಡಲೇ ತಮ್ಮ ಆಪ್ತ ಕಾರ್ಯದರ್ಶಿ ಶ್ರೀ ರಾಘವೇಂದ್ರರವರನ್ನು ಸ್ಥಳಕ್ಕೆ ಹೋಗುವಂತೆ ತಿಳಿಸಿ, ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆಗಳ ಪರಿಶೀಲನೆ ನಡೆಸಿ, ತ್ವರಿತ ಪರಿಹಾರ ನೀಡುವಂತೆ ಸೂಚನೆ ನೀಡಿದರು.

ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಹೆದ್ದಾರಿ ಇಲಾಖೆ ಕೂಡಲೇ ಕಾರ್ಯ ಪ್ರವೃತ್ತರಾಗಿ , ರಸ್ತೆ ವಿಭಾಜಕದ ಬಳಿ ಸೋಲಾರ್ ಬ್ಲಿಂಕರಗಳನ್ನು ಅಳವಡಿಸಿ, ರಿಫ್ಲೆಕ್ಟರ್ಗಳನ್ನು ವ್ಯವಸ್ಥೆ ಮಾಡಿದರು .

ಪುಲ್ಕೇರಿ ಬೈಪಾಸ್ ಸರ್ಕಲ್ ನ ಸುತ್ತ ಮತ್ತು ಕಾರ್ಕಳದ ಕಡೆಗೆ ಹೋಗುವ ರಸ್ತೆಯ ಗುಂಡಿ ಬಿದ್ದ ಜಾಗಕ್ಕೆ ಡಾಮರೀಕರಣ ಗೊಳಿಸಿದರು.

ಶಾಂಭವಿ ಸೇತುವೆ ಬಳಿಯ ಸಂಪರ್ಕ ರಸ್ತೆಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದ ಜಾಗದ ರಸ್ತೆ ಬದಿಯಲ್ಲಿ ತಾತ್ಕಾಲಿಕವಾದ ಚರಂಡಿ ವ್ಯವಸ್ಥೆ ಗೊಳಿಸಿದರು.

ಬಾಕಿ ಇರುವ ಬೀದಿ ದೀಪದ ವ್ಯವಸ್ಥೆ, ಬಸ್ಸು ತಂಗುದಾಣಗಳ ನಿರ್ಮಾಣ ,ರಕ್ಷಣಾ ಗ್ರಿಲ್ ಅಳವಡಿಕೆ, ಕಿತ್ತು ಹಾಕಿರುವ ಶಾಲಾ ಪ್ರವೇಶ ದ್ವಾರದ ಪುನರ್ ನಿರ್ಮಾಣ, 2 ಕಿ.ಮೀ ಸರ್ವಿಸ್ ರಸ್ತೆ, ಅವಶ್ಯಕತೆ ಯಿದ್ದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ, ಪ್ರವಾಸಿಗರ ಅನುಕೂಲಕ್ಕೆ ನಾಮಫಲಕಗಳ ವ್ಯವಸ್ಥೆ, ಸರ್ಕಲ್ ಗಳಲ್ಲಿ ಹೈಮಾಸ್ಟ್ ದೀಪ ಅಳವಡಿಕೆ, ತಡೆಗೋಡೆಯ ವಿಸ್ತರಣೆ ಮುಂತಾದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರ 2026 ಮಾರ್ಚ್ ಒಳಗಾಗಿ ಸಂಪೂರ್ಣಗೊಳಿಸಿಕೊಡಲಾಗುವುದು ಎಂದು ದಿಲೀಪ್ ಬಿಲ್ಡ್ ಕಾನ್ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಶ್ರೀ ಬಾಲಾಜಿಯವರು ಭರವಸೆ ನೀಡಿರುತ್ತಾರೆ .

LEAVE A REPLY

Please enter your comment!
Please enter your name here