ಕಾರ್ಕಳ: ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್ ನ ಸುತ್ತದ ಡಾಮರಿಕೃತ ರಸ್ತೆಯ ಮೇಲ್ಮೈ ಸಂಪೂರ್ಣ ಕಿತ್ತು ಹೋಗಿದ್ದು , ಗುಂಡಿ ಬಿದ್ದು ಮಳೆ ನೀರು ನಿಂತು ನಾಲ್ಕು ಕಡೆಗಳಿಂದ ನಿರಂತರವಾಗಿ ಬರುತ್ತಿರುವ ವಾಹನಗಳ ಸಂಚಾರಕ್ಕೆ ತೊಡಕುಂಟು ಮಾಡಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.
ಇತ್ತೀಚೆಗೆ ಭಾರೀ ಸುರಿಯುತ್ತಿರುವ ಮಳೆಯಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಉಡುಪಿಯ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ದೂರು ನೀಡಿದಾಗ ಕೂಡಲೇ ಸ್ಪಂದಿಸಿ ಸಂಸದರ ಆಪ್ತ ಕಾರ್ಯದರ್ಶಿ ರಾಘವೇಂದ್ರರವರು ಸೆ. 9 ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ, ಗ್ರಾಮಸ್ಥರಿಂದ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡು ಸ್ಥಳ ಪರಿಶೀಲಿಸಿ, ರಾ. ಹೆ.ಇಂಜಿನಿಯರ್ ಸಂತೋಷ್ ಕುಮಾರ್ ಮತ್ತು ದಿಲೀಪ್ ಬಿಲ್ಡ್ ಕಾನ್ ಕಸ್ಟ್ರೆಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಒಂದು ವಾರದ ಒಳಗೆ ಬೈಪಾಸ್ ಸರ್ಕಲ್ ಸುತ್ತ ಮತ್ತು ಕಾರ್ಕಳದ ಕಡೆಗೆ ಹೋಗುವ ರಸ್ತೆಯ ಮೇಲ್ಮೈಯನ್ನು ಮರುಡಾಮರೀಕರಣ ಮಾಡಿ ಕೊಡುವುದಾಗಿ ಭರವಸೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯಿಂದ ಇಂದಿರಾ ನಗರಕ್ಕೆ ಹೋಗುವ ರಸ್ತೆಯ ಬದಿಯ ಚರಂಡಿಯಲ್ಲಿ ಮಣ್ಣು ತುಂಬಿದ್ದು, ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಈಗಾಗಲೇ ಹಲವಾರು ಮಂದಿ ಪ್ರಯಾಣಿಕರು ಚರಂಡಿಗೆ ಜಾರಿ ಬಿದ್ದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿರುವುದನ್ನು ಪರಿಶೀಲಿಸಲಾಯಿತು. ಶಾಶ್ವತವಾಗಿ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡುವುದಾಗಿ ಹೆದ್ದಾರಿ ಇಂಜಿನಿಯರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್, ಗ್ರಾಪಂ ಅಧ್ಯಕ್ಷರಾದ ಯುವರಾಜ್ ಜೈನ್ , ಅಭಿವೃದ್ಧಿ ಅಧಿಕಾರಿ ಮಧು, ಸ್ಥಳೀಯ ಪಂಚಾಯಿತಿ ಸದಸ್ಯರಾದ ಸತೀಶ್ ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಕೋಟ್ಯಾನ್, ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಪಂಚಾಯತ್ ಸದಸ್ಯರುಗಳಾದ ಪ್ರಸಾದ್ ಪೂಜಾರಿ ಪ್ರಕಾಶ್ ರಾವ್ ಪ್ರಮುಖರಾದ ಶ್ರೀ ಮಾಧವ ಭಂಡಾರ್ಕರ್, ಪುರುಷೋತ್ತಮ ಗೌಡ, ಜಗದೀಶ ಶೆಟ್ಟಿಗಾರ್, ಜಯಂತ ಸಮಗಾರ, ರಾಜೇಶ್ ಪದ್ಮನಾಭನಗರ ಉಪಸ್ಥಿತರಿದ್ದರು.