ಕಡಬದ ಮಣ್ಣಗುಂಡಿ ಬಳಿ ಗುಡ್ಡ ಕುಸಿತ; ಬೆಂಗಳೂರು-ಮಂಗಳೂರು ಸಂಚಾರ ಬಂದ್! ಬದಲಿ ಮಾರ್ಗ ಹೇಗೆ?

0
70

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು, ಕೆಲವೆಡೆ ಅನಾಹುತ ಸಂಭವಿಸಿದೆ. ಕಡಬ ತಾಲೂಕಿನ ಮಣ್ಣಗುಂಡಿ ಬಳಿ ಗುಡ್ಡ ಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದಿದೆ. ಪರಿಣಾಮವಾಗಿ ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಸದ್ಯ ಮಣ್ಣು ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಮಂಗಳೂರು-ಬೆಂಗಳೂರು, ಬೆಂಗಳೂರು-ಮಂಗಳೂರು ಸಾಗುವ ಲಾರಿ, ಬಸ್, ಟ್ರಕ್​ಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಕಾರು, ಬೈಕ್​ಗಳು ಬದಲಿ ಮಾರ್ಗ ಬಳಸಲು ಎಸ್​​ಪಿ ಡಾ.ಅರುಣ್ ಮನವಿ ಮಾಡಿದ್ದಾರೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಚಾರಕ್ಕಿಲ್ಲ ಅಡಚಣೆ

ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಚಾರಕ್ಕೆ ಅಡಚಣೆ ಇಲ್ಲ. ರಾ.ಹೆ‌.75 ರ ಧರ್ಮಸ್ಥಳ ಕ್ರಾಸ್​​​ನಿಂದ ಸ್ವಲ್ಪ ಮುಂದೆ ಗುಡ್ಡ ಕುಸಿತ ಉಂಟಾಗಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರು ಬದಲಿ ಮಾರ್ಗ ಬಳಸಬೇಕಿದೆ.

ಬದಲಿ ಮಾರ್ಗ ಹೇಗೆ?

ನೆಲ್ಯಾಡಿ ಬಳಿ ಎಡಕ್ಕೆ ಹೋಗಿ ಕೊಕ್ಕಡ ಮಾರ್ಗವಾಗಿ ರಾ.ಹೆ‌.75 ತಲುಪಬಹುದಾಗಿದೆ. ಆದರೆ ಇದು ಸಣ್ಣ ವಾಹನಗಳು ಮಾತ್ರ ಬಳಸಬಹುದಾದ ಬದಲಿ ಮಾರ್ಗ ಎಂಬುದನ್ನು ಗಮನಿಸಬೇಕು. ಬೆಂಗಳೂರಿಂದ ಮಂಗಳೂರು ಕಡೆ ಬರುವವರು, ಕೊಕ್ಕಡ ಮೂಲಕವಾಗಿ ನೆಲ್ಯಾಡಿ ತಲುಪಬಹುದು‌.

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಬುಧವಾರ ಮಧ್ಯಾಹ್ನದಿಂದ ತಡ ರಾತ್ರಿ ವರೆಗೆ ನಿರಂತರ ಮಳೆಯಾಗಿದ್ದು, ಉಳ್ಳಾಲಬೈಲ್​​ನ ಕೆಲ ಮನೆಗಳಿಗೆ ನೀರು ನುಗ್ಗಿದೆ. ಕುಂಪಲ ನಿಸರ್ಗ ಲೇಔಟ್ ಕೆಲ ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರು ನಗರದ ಕೆಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ನಗರ ಹೊರವಲಯದ ಅದ್ಯಪಾಡಿ – ಕೈಕಂಬ‌ ಸಂಪರ್ಕಿಸುವ ರಸ್ತೆಮೇಲೆ ಮಣ್ಣು ಬಿದ್ದಿದೆ.

LEAVE A REPLY

Please enter your comment!
Please enter your name here