ಮಂಗಳೂರು : ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಮಿತಿಯು ಈ ನಿರ್ಧಾರವನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದೆ.
ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ರಾಜು ಕೆ ಇವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸಮಿತಿಯು, ಮೈಸೂರು ದಸರಾ ಕೇವಲ ಒಂದು ಸಾಂಸ್ಕೃತಿಕ ಹಬ್ಬವಲ್ಲ, ಬದಲಾಗಿ ಕರ್ನಾಟಕದ ಅತ್ಯಂತ ದೊಡ್ಡ ಧಾರ್ಮಿಕ ಮತ್ತು ಪಾರಂಪರಿಕ ಹಬ್ಬ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆ ನಡೆಯುತ್ತಿದ್ದು, 10ನೇ ದಿನ ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬದ ಉದ್ಘಾಟನೆಗೆ ಆಹ್ವಾನಿಸಲ್ಪಡುವ ಮುಖ್ಯ ಅತಿಥಿಯು ದೇವಿಯ ಮೇಲೆ ಶ್ರದ್ಧೆ, ಮೂರ್ತಿ ಪೂಜೆಯ ಮೇಲೆ ಭಕ್ತಿ ಹಾಗೂ ನಾಡದೇವಿಯ ಮೇಲೆ ಗೌರವ ಹೊಂದಿರಬೇಕು.
ಭಾನು ಮುಷ್ತಾಕ್ ಅವರು ಈ ಹಿಂದೆ ಮಾಡಿದ ಭಾಷಣಗಳಲ್ಲಿ ನಾಡದೇವಿ ಭುವನೇಶ್ವರಿ ದೇವಿಯನ್ನು ನಂಬುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ದತ್ತಪೀಠ ಹೋರಾಟದ ಸಂದರ್ಭದಲ್ಲೂ ಅವರು ಮುಸ್ಲಿಂ ಸಮುದಾಯದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂತಹ ವ್ಯಕ್ತಿಯನ್ನು ಹಿಂದೂಗಳ ಪವಿತ್ರ ಹಬ್ಬದ ಉದ್ಘಾಟನೆಗೆ ಆಹ್ವಾನಿಸುವುದು ಸೂಕ್ತವಲ್ಲ. ಇದು ಹಿಂದೂ ಸಮುದಾಯದ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತಿದೆ.
ಈ ಪವಿತ್ರ ಕಾರ್ಯಕ್ರಮದ ಉದ್ಘಾಟನೆಗೆ ಡಾ. ಎಸ್.ಎಲ್. ಭೈರಪ್ಪ ಅವರಂತಹ ಗಣ್ಯ ವ್ಯಕ್ತಿಗಳನ್ನು ಪರಿಗಣಿಸದೆ, ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಸರಿಯಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. “ಡಾ. ಎಸ್.ಎಲ್. ಭೈರಪ್ಪ ಅವರು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗಳ ಜೊತೆಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ಸಾಹಿತ್ಯ ಮತ್ತು ದಾರ್ಶನಿಕ ಕೊಡುಗೆಗಳು ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದಿವೆ. ಇಂತಹ ಗೌರವಾನ್ವಿತ ವ್ಯಕ್ತಿಗಳನ್ನು ಕಡೆಗಣಿಸುವುದು ನಾಡಿನ ಸಂಸ್ಕೃತಿಗೆ ಮಾಡುವ ಅವಮಾನ,” ಎಂದು ಸಮಿತಿ ತಿಳಿಸಿದೆ.
ಕೊಟ್ಯಾಂತರ ಹಿಂದೂ ಭಕ್ತರ ಭಾವನೆಗಳಿಗೆ ಗೌರವ ನೀಡಿ, ಭಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಮತ್ತು ಮೈಸೂರು ದಸರಾ ಹಬ್ಬದ ಪಾವಿತ್ರ್ಯವನ್ನು ಕಾಪಾಡಲು ಡಾ. ಎಸ್. ಎಲ್. ಭೈರಪ್ಪ ಅವರಂತಹ ಗಣ್ಯರನ್ನು ಆಹ್ವಾನಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಈ ಮೂಲಕ ಆಗ್ರಹಿಸಿದೆ.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ, ಸೌ. ಚೇತನಾ ಉಪಾಧ್ಯೆ, ಶ್ರೀ ರಾಜೇಶ್ ಆಚಾರ್ಯ, ಹಿಂದೂ ಸೇವಾ ಸಮಿತಿಯ ಶ್ರೀಸುರೇಂದ್ರ , ಜಪ್ಪಿನಮೊಗರು ಭಜನಾ ಮಂಡಳಿಯ ಶ್ರೀ ದಿನಕರ್ ಬಜಾಲ್ , ನ್ಯಾಯವಾದಿಗಳಾದ ಶ್ರೀ ಈಶ್ವರ ಕೊಟ್ಟಾರಿ ಮತ್ತು ಶ್ರೀ ತೀರ್ಥೆ ಶ್ ಗೌಡ , ಧರ್ಮಾಭಿಮಾನಿಗಳಾದ ಶ್ರೀ. ಪ್ರವೀಣ್, ಶ್ರೀ ಜಯಪ್ರಕಾಶ್ , ಶ್ರೀ ಸತೀಶ್ ಉರ್ವ , ಶ್ರೀರಾಜೇಂದ್ರ ಪೇಜಾವರ, ಹಿಂದೂ ಯುವಸೇನೆಯ ಶ್ರೀ ಜನಾರ್ಧನ ಅರ್ಕುಳ ಮುಂತಾದ ಹಿಂದೂ ಸಂಘಟನೆಗಳು ಮತ್ತು ಹಿಂದುತ್ವನಿಷ್ಠರು ಮನವಿಯನ್ನು ಸಲ್ಲಿಸಿದರು.