ಪೆರ್ಡೂರಿನಲ್ಲಿ ‘ಹಿರಿಯೆರೊಟ್ಟುಗೊಂಜಿ ದಿನ’ ಕಾರ್ಯಕ್ರಮ

0
112

ಆಡಿ, ಹಾಡಿ, ಕುಣಿದು ಸಂಭ್ರಮಿಸಿದ ಹಿರಿಯರು .

ಪೆರ್ಡೂರು : ಇಲ್ಲಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಹಿರಿಯೆರೊಟ್ಟುಗೊಂಜಿ ದಿನ’ ವಿಶೇಷ ಕಾರ್ಯಕ್ರಮವು ಸಂಭ್ರಮದಿಂದ ಜರಗಿತು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 60 ರಿಂದ 96 ವರ್ಷ ವಯಸ್ಸಿನ ನೂರಾರು ಹಿರಿಯ ನಾಗರಿಕರು ಪಾಲ್ಗೊಂಡು ಆಡಿ, ಹಾಡಿ, ನರ್ತಿಸಿ ಹರ್ಷದಿಂದ ದಿನವಿಡೀ ಸಂಭ್ರಮಿಸಿದರು. ಕಾರ್ಯಕ್ರಮವು ಹಿರಿಯರಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯವನ್ನು ತುಂಬಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭ ಪ್ರತೀಕ್ಷಾ ಕೋಟ್ಯಾನ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖಂಡ ಹಾಗೂ ಸಮಿತಿಯ ಗೌರವಾಧ್ಯಕ್ಷ ಕೆ. ಶಾಂತಾರಾಮ ಸೂಡ ಅವರು, ಇಂದಿನ ಹಲವಾರು ಮುಂದುವರಿದ ಕುಟುಂಬಗಳಲ್ಲಿ ವೃದ್ಧಾಪ್ಯ ಒಂದು ರೀತಿಯಲ್ಲಿ ಶಾಪದಂತಾಗಿದೆ. ಅನೇಕ ಹಿರಿಯರು ಮನರಂಜನೆ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ವಂಚಿತರಾಗಿ ನೀರಸ ಜೀವನ ನಡೆಸುತ್ತಿದ್ದಾರೆ. ಅಂತಹ ಹಿರಿಯರಲ್ಲಿ ಜೀವನೋತ್ಸಾಹ ತುಂಬಲು ಈ ರೀತಿಯ ಕಾರ್ಯಕ್ರಮಗಳು ಅತ್ಯಗತ್ಯ. ಸಮಾಜದ ಅಗತ್ಯಗಳನ್ನು ಅರಿತು ಸಮಿತಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಅವರು, ದೇವರ ನಂತರದ ಸ್ಥಾನ ಹೆತ್ತವರದು. ವೃದ್ಧಾಪ್ಯದಲ್ಲಿ ಮಕ್ಕಳಂತೆಯೇ ಹಿರಿಯರಿಗೂ ಪ್ರೀತಿ, ಕಾಳಜಿ ನೀಡಬೇಕಿದೆ. ಯೌವನದಿಂದ ವೃದ್ಧಾಪ್ಯವರೆಗೂ ಕುಟುಂಬದ ಸುಖಸಂತೋಷಕ್ಕಾಗಿ ನಿಸ್ವಾರ್ಥವಾಗಿ ದುಡಿದ ಹಿರಿಯರು ಜೀವನದ ಮುಸ್ಸಂಜೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ದುಃಖಕರ. ಕುಟುಂಬ ಹಾಗೂ ಸಮಾಜದಲ್ಲಿ ಹಿರಿಯರು ಸಂತಸದಿಂದ ಬದುಕುವ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಇಡೀ ದಿನದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಹಿರಿಯರು ಸಂಭ್ರಮಿಸಿದ ರೀತಿಯನ್ನು ಕಂಡಾಗ ಸಮಿತಿಯ ಪ್ರಯತ್ನ ಸಾರ್ಥಕವಾಗಿದೆ. ಎಲ್ಲೆಡೆ ಸಂಘ-ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ನಾಟಿ ವೈದ್ಯರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿರುವ 96 ವರ್ಷದ ರಾಧಾ ಶೆಟ್ಟಿ (ಹೊಳಿಂಜೆ) ಹಾಗೂ 70 ವರ್ಷದ ಸುಂದರಿ ಆಚಾರ್ಯ (ಬುಕ್ಕಿಗುಡ್ಡೆ) ಅವರನ್ನು ಸನ್ಮಾನಿಸಲಾಯಿತು.

ಖ್ಯಾತ ವಾಗ್ಮಿ ಹಾಗೂ ಹಿರಿಯ ನಾಗರಿಕರ ಜಾಗೃತಿಗಾಗಿ ಶ್ರಮಿಸುತ್ತಿರುವ ನಿತ್ಯಾನಂದ ಭಟ್ (ಉಡುಪಿ) ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹಿರಿಯರು–ಕಿರಿಯರ ನಡುವೆ ಸಮನ್ವಯದ ಬದುಕು ಹಾಗೂ ಹಿರಿಯರಿಗಾಗಿ ಇರುವ ಕಾನೂನು ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ತೀರ್ಥಹಳ್ಳಿಯ ಖ್ಯಾತ ಗಾಯಕ ರಮೇಶ್ ಹುಣಸೆಮಕ್ಕಿ ಅವರ ಹಾಡುಗಳು ಹಿರಿಯರನ್ನು ರಂಜಿಸಿತು.

ಹಲವು ಹಿರಿಯರು ತಮ್ಮೊಳಗಿನ ಪ್ರತಿಭೆಗಳನ್ನು ಪ್ರದರ್ಶಿಸಿದರು. ಮಲ್ಪೆಯ ಲೀಲಾವತಿ ಅವರ ಕುಟುಂಬವು ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರೊಂದಿಗೆ ಸೇರಿ ಜಲಸಂರಕ್ಷಣೆಯ ಕುರಿತ ಛದ್ಮವೇಷದ ಮೂಲಕ ಜನಜಾಗೃತಿ ಮೂಡಿಸಿತು. ಮೊಮ್ಮಕ್ಕಳೊಂದಿಗೆ ಹುಲಿ ವೇಷದಲ್ಲಿ ಕುಣಿದು ಹಿರಿಯರು ವಿಶೇಷ ಗಮನ ಸೆಳೆದರು. ವಯಸ್ಸು ಸಂಖ್ಯೆಗೆ ಮಾತ್ರ, ಮನಸ್ಸಿಗೆ ಅಲ್ಲ ಎಂಬಂತೆ ಹಿರಿಯರು ದಿನವಿಡೀ ವಿವಿಧ ಚಟುವಟಿಕೆಗಳಲ್ಲಿ ತೊಡಗಿ ಸಂತಸದಲ್ಲಿ ತೇಲಾಡಿದರು.

ಹಿರಿಯರೊಬ್ಬರು ತಮ್ಮ ಭಾವನೆ ವ್ಯಕ್ತಪಡಿಸಿ, “ನಾವೂ ಎಲ್ಲರಂತೆ ಸಂಭ್ರಮಿಸಬೇಕೆಂಬ ಆಸೆ ಇದ್ದರೂ ಅವಕಾಶಗಳು ಕಡಿಮೆ. ನಮ್ಮಿಗಾಗಿ ಇಡೀ ದಿನ ಮೀಸಲಿಟ್ಟು ಮಕ್ಕಳಂತೆ ಕುಣಿಯಲು ಅವಕಾಶ ಕಲ್ಪಿಸಿದ ಸಮಿತಿಗೆ ದೇವರು ಎಲ್ಲವನ್ನೂ ಕರುಣಿಸಲಿ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿ” ಎಂದು ಹೇಳಿದರು.

ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್, ಗೌರವಾಧ್ಯಕ್ಷ ಕೆ. ಶಾಂತಾರಾಮ ಸೂಡ, ಮುಖ್ಯ ಅತಿಥಿ ನಿತ್ಯಾನಂದ ಭಟ್, ಕಾರ್ಯದರ್ಶಿ ರವೀಂದ್ರ ನಾಡಿಗ್, ಜತೆ ಕಾರ್ಯದರ್ಶಿ ಸತೀಶ್ ಕುಲಾಲ್ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here